ಹಾಸನ: ಜಿಲ್ಲೆಯ ಐತಿಹಾಸಿಕ ಹಾಸನಾಂಬೆ ದೇವಸ್ಥಾನದಲ್ಲಿ ದರ್ಶನ ಆರಂಭವಾಗಿ ಇಂದಿಗೆ ಎಂಟನೇ ದಿನವಾಗಿದ್ದು, ಭಕ್ತರ ದಂಡು ನಿರಂತರವಾಗಿ ಹರಿದು ಬರುತ್ತಿದೆ. ಪ್ರತಿದಿನದಂತೆ ಇಂದು ಕೂಡ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾಸನಾಂಬೆ ದೇವಿಯ ದರ್ಶನ ಪಡೆಯಲು ಕಿಕ್ಕಿರಿದು ಆಗಮಿಸಿದ್ದಾರೆ.
ಶುಕ್ರವಾರದಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರೊಂದಿಗೆ ಆಗಮಿಸಿ ದೇವಿ ದರ್ಶನ ಪಡೆದರು. ಹಾಗೆ ಹಾಸನಾಂಬೆ ದೇವಿಯ ದರ್ಶನಕ್ಕೆ ಹಲವು ಗಣ್ಯಾತಿಗಣ್ಯರು ಭೇಟಿ ನೀಡುತ್ತಿರುವುದು ವಿಶೇಷವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಗುಲಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ಇದರ ಜೊತೆಗೆ ಸಚಿವರಾದ ಶಿವರಾಜ್ ಎಸ್. ತಂಗಡಗಿ, ನರೇಂದ್ರಸ್ವಾಮಿ ಮತ್ತು ಪುಟ್ಟರಂಗಶೆಟ್ಟಿ ಅವರೂ ಕೂಡ ಹಾಸನಾಂಬೆಯ ಆಶೀರ್ವಾದ ಪಡೆದರು. ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಸಹ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದರು
ದೇವಿ ದರ್ಶನಕ್ಕೆ ಆಗಮಿಸಿದ್ದ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಮುಖ್ಯದ್ವಾರದ ಬಳಿ ಮುಜುಗರದ ಸನ್ನಿವೇಶ ಎದುರಾಯಿತು. ಪ್ರೋಟೋಕಾಲ್ ಪಾಲಿಸದೆ ನೇರವಾಗಿ ಸರ್ಕಾರಿ ವಾಹನದಲ್ಲಿ ಮುಖ್ಯದ್ವಾರದ ಬಳಿಗೆ ಬಂದಿದ್ದ ಸಚಿವರ ಕಾರನ್ನು ಕರ್ತವ್ಯನಿರತ ಭದ್ರತಾ ಸಿಬ್ಬಂದಿ ಒಳಗೆ ಬಿಡದೆ ತಡೆದರು. “ಇವರು ಸಚಿವರು, ಕಾರು ಒಳಗೆ ಬಿಡಿ” ಎಂದು ಸಚಿವರ ಪಿಎ ಮನವಿ ಮಾಡಿದರೂ ಸಿಬ್ಬಂದಿ ನಿಯಮ ಸಡಿಲಿಸಲು ನಿರಾಕರಿಸಿದರು. ಅಂತಿಮವಾಗಿ ಸಚಿವರು ಕಾರಿನಿಂದಿಳಿದು ಕಾಲ್ನಡಿಗೆಯಲ್ಲೇ ದೇವಾಲಯದ ಆವರಣ ಪ್ರವೇಶಿಸಿ ಹಾಸನಾಂಬೆಯ ದರ್ಶನ ಪಡೆದರು.
