ಹಾಸನ: ಹಾಸನ ಡಿಸಿ ಕೆ.ಎಸ್ ಲತಾಕುಮಾರಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ನಡುವಿನ ಜಟಾಪಟಿ ಮತ್ತೊಂದು ಹಂತದ ತಿರುವು ಪಡೆದಿದೆ.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಲಂಚದ ಆರೋಪಕ್ಕೆ ಖಡಕ್ಕಾಗಿ ಪ್ರತಿಕ್ರಿಯೆ ನೀಡಿದ್ದ ಲತಾಕುಮಾರಿ ಅವರು ಬಳಿಕ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಸ್ಟೇಟಸ್ ಪೋಸ್ಟ್ ಹಾಕುವ ಮೂಲಕ ಮತ್ತೊಮ್ಮೆ ಕೌಂಟರ್ ಕೊಟ್ಟಿದ್ದಾರೆ.
ತಮ್ಮ ವಾಟ್ಸಪ್, ಎಕ್ಸ್‌ಗಳಲ್ಲಿ ಇಂಗ್ಲಿಷ್ ಬರಹವಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ. ಸಿಂಹ ಸುಮ್ಮನೆ ಕೂತಿದ್ರೂ ನಾಯಿಗಳು ಬೊಗಳುವ ಇಮೇಜ್ ಹಾಕಿದ್ದಾರೆ. ಇದರ ಜೊತೆಗೆ NOT EVERY VOICE DESERVES A RESPONSE (ಪ್ರತಿಯೊಂದು ಧ್ವನಿಯೂ ಪ್ರತಿಕ್ರಿಯೆಗೆ ಅರ್ಹವಲ್ಲ) ಎಂದು ಬರವಿದೆ. ಎರಡು ಅರ್ಥವಿರುವ ಈ ಪೋಸ್ಟರ್‌ನ ಪೋಸ್ಟ್ ಇದೀಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕೇಂದ್ರ ಸಚಿವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕುಮಾರಸ್ವಾಮಿ ಅವರದ್ದು ಸುಳ್ಳು ಆರೋಪ, ಈ ಬಗ್ಗೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಕೊಟ್ಟಿದ್ದೇನೆ. ಎಫ್‌ಐಆರ್ ಕೂಡ ಮಾಡಿಸಿದ್ದೇನೆ. ಸುಳ್ಳು ಆರೋಪಗಳಿಗೆ ಏನ್ ಉತ್ತರ ಕೊಡೋಕಾಗುತ್ತೆ. ಅಲ್ಲದೇ ಈ ರೀತಿ ಹಿರಿಯರು ಸುಳ್ಳು ಆರೋಪ ಮಾಡಿದ್ರೆ, ಯಾವ ರೀತಿ ಕ್ರಮ ತಗೋಬೇಕು ಅಂತಾ ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತರುತ್ತೇನೆ, ಅವರಿಗೆ ಪತ್ರ ಬರೆಯುತ್ತೇನೆ. ಜೊತೆಗೆ ಪಿಡಿಎಫ್ ಬಿಡುಗಡೆ ಯಾರು ಬಿಡುಗಡೆ ಮಾಡಿದ್ರು, ಅವರ ವಿರುದ್ಧ ಕ್ರಮ ತಗೋತೇವೆ. ಕೆಲಸ ಮಾಡೋದು ಬಿಟ್ಟುಬಿ ಯಾಕೆ ಹೀಗೆ ಅಧಿಕಾರಿಗಳಿಗೆ ಹಿಂಸೆ ಮಾಡ್ತಿದ್ದಾರೆ ಅಂತಾ ಪ್ರಶ್ನೆ ಮಾಡಿದ್ದರು.
ಇದಕ್ಕೂ ಮುನ್ನ ಹಾಸನದ ಶಾಸಕ ಹೆಚ್.ಪಿ ಸ್ವರೂಪ್‌ಪ್ರಕಾಶ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಹಾಗೂ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ ಮಾಡಿದ್ದರು. ಇದೇ ವೇಳೆ ಡಿಸಿ ಪಿಎ ಶಶಿಕಿರಣ್ ಅವರದ್ದು ಎನ್ನಲಾದ ವಾಟ್ಸಪ್ ಚಾಟ್ ರಿಲೀಸ್ ಮಾಡಿದ್ದರು.
