ಬೆಂಗಳೂರು: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಕೊರೆವ ಚಳಿ ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು, ಅಹೋರಾತ್ರಿ ಹೋರಾಟ ಮುಂದುವರಿಸಿದ್ದಾರೆ.
ಸಚಿವರ ಭರವಸೆಗೂ ಜಗ್ಗದೆ ಬೇಡಿಕೆ ಈಡೇರಿಸಿ ಅಂತಾ ಪಟ್ಟು ಹಿಡಿದಿದ್ದಾರೆ. ಮಾಸಿಕ ಗೌರವಧನ 15 ಸಾವಿರ ರೂಪಾಯಿಗೆ ಏರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ. ಧರಣಿ ಸ್ಥಳಕ್ಕೆ ಹೆಲ್ತ್ ಮಿನಿಸ್ಟರ್ ಯು.ಟಿ. ಖಾದರ್ ಭೇಟಿ ನೀಡಿ ನಿನ್ನೆ ಮನವಿ ಸ್ವೀಕರಿಸಿದ್ರು. ಬೇಡಿಕೆ ಬಗ್ಗೆ ಸಿಎಂ ಜೊತೆ ಚರ್ಚಿಸಿ ನ. 19ರ ಸಚಿವ ಸಂಪುಟ ಸಭೆಯಲ್ಲೂ ಪ್ರಸ್ತಾಪಿಸುವ ಭರವಸೆ ನೀಡಿದ್ದಾರೆ. ಅಲ್ಲದೆ, ಇಲಾಖೆ ಅಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳ ಸಭೆ ನಡೆಸಿ, ರೂಟೀನ್ ಕೆಲಸಗಳಿಗೆ ಬರಬೇಕಾದ 8 ಸಾವಿರ ಹಣ ಪ್ರತಿ ಕಾರ್ಯಕರ್ತೆಯರಿಗೆ ಪೂರ್ಣ ಪ್ರಮಾಣದಲ್ಲಿ ತಲುಪದಿರುವ ಆರೋಪವನ್ನ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಧರಣಿ ನಿಲ್ಲಿಸಿ ಅಂತಾ ಸಚಿವರು ಮನವಿ ಮಾಡಿದ್ರೂ, ಬೇಡಿಕೆ ಈಡೇರೋವರೆಗೂ ಹೋರಾಟ ನಿಲ್ಲಿಸುವುದಿಲ್ಲ ಅಂತಾ ಪಟ್ಟು ಹಿಡಿದಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟಕ್ಕೆ ಇಳಿದಿರುವ ಆಶಾ ಕಾರ್ಯಕರ್ತೆಯರು ಪುಟ್ಟ ಪುಟ್ಟ ಮಕ್ಕಳನ್ನೂ ತಮ್ಮೊಂದಿಗೆ ಕರೆತಂದಿದ್ದಾರೆ. ಚಳಿಯ ನಡುವೆಯೇ ಪುಟಾಣಿ ಮಕ್ಕಳೊಂದಿಗೆ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾರ್ಯಕರ್ತೆಯರ ಪರಿಸ್ಥಿತಿ ಗಮನ ಸೆಳೆದಿದೆ.
