Sunday, November 22, 2026
Homeಜಿಲ್ಲಾಸುದ್ದಿಕಾಮಗಾರಿ ಪೂರ್ಣಗೊಳಿಸದೆ ಅರ್ಧಕ್ಕೆ ಕೈಬಿಟ್ಟ ಗುತ್ತಿಗೆದಾರರು: ಬಲಿಗೆ ಜಾರಿಕೇಬೈಲ್ ರಸ್ತೆ ಅಭಿವೃದ್ಧಿ ಅತಂತ್ರ

ಕಾಮಗಾರಿ ಪೂರ್ಣಗೊಳಿಸದೆ ಅರ್ಧಕ್ಕೆ ಕೈಬಿಟ್ಟ ಗುತ್ತಿಗೆದಾರರು: ಬಲಿಗೆ ಜಾರಿಕೇಬೈಲ್ ರಸ್ತೆ ಅಭಿವೃದ್ಧಿ ಅತಂತ್ರ

Telegram Group
Join Now

ಚಿಕ್ಕಮಗಳೂರು : ಕಳಸ ತಾಲ್ಲೂಕಿನ ಬಲಿಗೆ ಜಾರಿಕೇಬೈಲ್ ರಸ್ತೆ ಅಭಿವೃದ್ಧಿಗಾಗಿ ₹10 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದ 162 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಕಾಮಗಾರಿ ಪೂರ್ಣಗೊಳಿಸದೆ ಗುತ್ತಿಗೆದಾರರು ಹಿಂದೆ ಸರಿದಿರುವುದರಿಂದ ರಸ್ತೆ ಅಭಿವೃದ್ಧಿ ಕಾರ್ಯ ಅತಂತ್ರಗೊಂಡಿದ್ದು, ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜುಲೈ 29ರಂದು ಕಾಮಗಾರಿ ಆರಂಭಿಸಲು ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸಿದ್ದರು. ಅಂದು ಭಾರಿ ಮಳೆಯಾಗುತ್ತಿದ್ದರೂ ಕಾಂಕ್ರೀಟ್ ಹಾಕಲು ಮುಂದಾಗಿದ್ದನ್ನು ಗಮನಿಸಿದ ಸ್ಥಳೀಯರು, ಮಳೆಯ ನಡುವೆ ಕಾಂಕ್ರೀಟ್ ಹಾಕುವುದರಿಂದ ಕಾಮಗಾರಿಯ ಗುಣಮಟ್ಟಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಸಂಬಂಧಪಟ್ಟ ಎಂಜಿನಿಯರ್‌ಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.

ಮಳೆ ಕಡಿಮೆಯಾದ ಬಳಿಕ ಗುಣಮಟ್ಟದ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸ್ಥಳೀಯರು ಮನವಿ ಮಾಡಿದ್ದರು. ಆದರೆ, ಮಳೆ ಕಡಿಮೆಯಾದರೂ ಕಾಮಗಾರಿ ಪುನರಾರಂಭವಾಗಲಿಲ್ಲ. ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಎಂಜಿನಿಯರ್‌ಗಳನ್ನು ಸಂಪರ್ಕಿಸಿ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿದರೂ, ದಿನಾಂಕ ಮುಂದೂಡಲಾಗುತ್ತಿತ್ತು. ಇದೀಗ ಕಾಮಗಾರಿಗಾಗಿ ಸ್ಥಳಕ್ಕೆ ತಂದಿದ್ದ ಸಾಮಗ್ರಿಗಳನ್ನು ಗುತ್ತಿಗೆದಾರರು ವಾಪಸ್ ಕೊಂಡೊಯ್ದಿದ್ದಾರೆ.

ಈ ಕುರಿತು ಗುತ್ತಿಗೆದಾರರನ್ನು ದೂರವಾಣಿ ಮೂಲಕ ವಿಚಾರಿಸಿದಾಗ, ‘ನನಗೆ ನಷ್ಟವಾಗಿದೆ, ಕಾಮಗಾರಿಯನ್ನು ಬೇರೆಯವರಿಗೆ ವಹಿಸಲಾಗಿದೆ’ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.ಸಾರ್ವಜನಿಕರ ಹಣದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಗುಣಮಟ್ಟದಿಂದ ಪೂರ್ಣಗೊಳ್ಳಬೇಕು. ಮಳೆಯಲ್ಲಿ ಕಾಂಕ್ರೀಟ್ ಹಾಕಬಾರದು ಎಂದು ಸ್ಥಳೀಯರು ತಿಳಿಸಿದ್ದು ಕಾಮಗಾರಿಗೆ ವಿರೋಧ ವ್ಯಕ್ತಪಡಿಸುವ ಉದ್ದೇಶದಿಂದಲ್ಲ. ಕಾಮಗಾರಿಯ ಗುಣಮಟ್ಟ ಕಾಪಾಡುವ ಉದ್ದೇಶದಿಂದ ಮನವಿ ಮಾಡಿದ್ದರೂ, ಅದನ್ನು ಪೂರ್ಣಗೊಳಿಸುವ ಜವಾಬ್ದಾರಿ ನಿರ್ವಹಿಸದೆ ಗುತ್ತಿಗೆದಾರರು ಹಿಂದೆ ಸರಿದಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಕಾಮಗಾರಿಯನ್ನು ಬೇರೆಯವರಿಗೆ ವಹಿಸಲಾಗಿದೆ ಎಂಬ ಗುತ್ತಿಗೆದಾರರ ಹೇಳಿಕೆಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕೃತ ಅನುಮತಿ ಇದೆಯೇ? ಕಾಮಗಾರಿ ಸ್ಥಗಿತಗೊಂಡಿರುವುದಕ್ಕೆ ಕಾರಣವೇನು? ನಿಗದಿತ ಅನುದಾನದಲ್ಲಿ ರಸ್ತೆ ನಿರ್ಮಾಣ ಯಾವಾಗ ಪೂರ್ಣಗೊಳ್ಳಲಿದೆ? ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸ್ಥಗಿತಗೊಂಡಿರುವ ಕಾಮಗಾರಿಯನ್ನು ತಕ್ಷಣ ಪುನರಾರಂಭಿಸಿ 162 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಬೇಕು. ಕಾಮಗಾರಿ ಮತ್ತಷ್ಟು ವಿಳಂಬವಾದರೆ ಸಂಬಂಧಪಟ್ಟ ಇಲಾಖೆಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!