ಶೃಂಗೇರಿ: ಬೇಲೂರಿನಿಂದ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುವ ಸರ್ಕಾರದ ನಿರ್ಧಾರದ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ರೈತರು ಹಾಗೂ ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಅಧ್ಯಕ್ಷರಾದ ವಿಶ್ವನಾಥ್ ಗದ್ದೆಮನೆ
ಈ ಹೋರಾಟದ ಹಿನ್ನೆಲೆಯಲ್ಲಿ, ಜಿಲ್ಲೆಯ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಸಾಧ್ಯತೆಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ. ಇಂತಹ ಸಂದರ್ಭದಲ್ಲಿ ನಾವು ಇಂದು ಧ್ವನಿ ಎತ್ತದೆ, ಒಗ್ಗಟ್ಟಿನಿಂದ ಹೋರಾಡದೆ ಹೋದರೆ, ನಾಳೆ ನಮ್ಮ ಬದುಕು, ನಮ್ಮ ಜೀವ ಹಾಗೂ ನಮ್ಮ ಆಸ್ತಿಪಾಸ್ತಿಗಳ ಸುರಕ್ಷತೆಯೇ ಪ್ರಶ್ನಾರ್ಥಕವಾಗಬಹುದು.

ಈ ಹಿನ್ನೆಲೆಯಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸಲು ಅಗತ್ಯ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದೇವೆ.
ಆದ್ದರಿಂದ ನಮ್ಮ ಜಿಲ್ಲೆಯ ಎಲ್ಲಾ ರೈತ ಬಾಂಧವರು, ನಾಗರಿಕರು ಹಾಗೂ ಸಾರ್ವಜನಿಕರಲ್ಲಿ ನಮ್ಮ ಮನವಿ ಏನೆಂದರೆ, ರಾಜಕೀಯ ಭೇದಭಾವಗಳನ್ನು ಬದಿಗಿಟ್ಟು, ಪಕ್ಷಾತೀತವಾಗಿ ನಾವೆಲ್ಲರೂ ಒಂದಾಗಿ ಈ ಹೋರಾಟದಲ್ಲಿ ಕೈಜೋಡಿಸಬೇಕಿದೆ.
ಇದು ಯಾವುದೋ ಒಬ್ಬ ವ್ಯಕ್ತಿಯ ಹೋರಾಟವಲ್ಲ. ಇದು ಯಾವುದೋ ಒಂದು ಸಂಘಟನೆಯ ಹೋರಾಟವೂ ಅಲ್ಲ. ಇದು ನಮ್ಮ ನೆಲ, ನಮ್ಮ ಬದುಕು, ನಮ್ಮ ಆಸ್ತಿ ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ಉಳಿಸಿಕೊಳ್ಳುವ ಅಸ್ತಿತ್ವದ ಹೋರಾಟ.
ಹೋರಾಟದ ಮುಂದಿನ ರೂಪುರೇಷೆಗಳು, ಕಾರ್ಯಕ್ರಮಗಳು ಹಾಗೂ ನಿರ್ಧಾರಗಳ ಕುರಿತು ಶೀಘ್ರದಲ್ಲೇ ನಿಮ್ಮೊಂದಿಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಿದ್ದೇವೆ.
ಬನ್ನಿ, ಎಲ್ಲರೂ ಒಂದಾಗೋಣ. ನಮ್ಮ ನೆಲ ಮತ್ತು ಬದುಕಿನ ರಕ್ಷಣೆಗಾಗಿ ಶಾಂತಿಯುತವಾಗಿ, ಸಂಘಟಿತವಾಗಿ ಹೋರಾಡಲು ಸಿದ್ಧರಾಗೋಣ ಎಂದು ಕರೆ ಕೊಟ್ಟಿದ್ದಾರೆ.
