ಕೊಲ್ಕತ್ತಾ : ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಪಶ್ಚಿಮಬಂಗಾಲದ ಆರ್ಜಿ ಕರ್ ವೈದ್ಯಕೀಯ ಕಾಲೇಜಿನ ತರಬೇತಿ ನಿರತ ವೈದ್ಯೆಯ ಅತ್ಯಾಚಾರ, ಕೊಲೆ ಆರೋಪಿಗೆ ಜೀಲ್ದಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇದಕ್ಕೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಕೋರಿ ಬಂಗಾಳ ಸರ್ಕಾರ ಕೋಲ್ಕತ್ತಾ ಹೈಕೋರ್ಟ್ಗೆ ಮನವಿ ಮಾಡಿದೆ. ಜೀವಾವಧಿ ಶಿಕ್ಷೆ ವಿಧಿಸಿದ ಸೀಲ್ದಾ ನ್ಯಾಯಾಲಯದ ತೀರ್ಪಿನ ವಿರುದ್ಧ ಅಡ್ವೊಕೇಟ್ ಜನರಲ್ ಕಿಶೋರ್ ದತ್ತಾ ಅವರು ವಿಭಾಗೀಯ ಪೀಠದ ನ್ಯಾಯಮೂರ್ತಿ ದೇಬಂಗ್ಶು ಬಸಾಕ್ ಅವರ ಬಳಿ ಮನವಿ ಮಾಡಿದ್ದಾರೆ. ಖುದ್ದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನ್ಯಾಯಾಲಯದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಆರೋಪಿಗೆ ಮರಣದಂಡನೆಗೆ ಮೊದಲ ದಿನದಿಂದಲೇ ನಾವೆಲ್ಲರು ಒತ್ತಾಯಿಸಿದ್ದೆವು. ಆದರೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ನಾವು ನಮ್ಮ ಬೇಡಿಕೆಗೆ ಬದ್ಧರಾಗಿದ್ದೇವೆ ಎಂದಿದ್ದಾರೆ.
ಈ ಮಧ್ಯೆ ಜನಸಾಮಾನ್ಯರು ಕೂಡಾ ತೀರ್ಪಿನ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ. ಇಂಥಾ ಘೋರ ಅಪರಾಧಕ್ಕೆ ಕೇವಲ ಜೀವಾವಧಿ ಶಿಕ್ಷೆಯೇ ಅಂತ ಜನ ಕೇಳುತ್ತಿದ್ದಾರೆ.
