ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಕಾರು ನದಿಗೆ ಉರುಳಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಮಂಡಗದ್ದೆ ಬಳಿ ನಡೆದಿದೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಮಂಡಗದ್ದೆ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ರಸ್ತೆ ಪಕ್ಕದಲ್ಲಿದ್ದ ನದಿಗೆ ಉರುಳಿದೆ. ಮೃತ ಮಹಿಳೆಯನ್ನು ಕುಂದಾಪುರದ ತೆಕ್ಕಟ್ಟೆಯ ನಿವಾಸಿ ಸವಿತಾ ದೇವಾಡಿಗ (57) ಎಂದು ಗುರುತಿಸಲಾಗಿದೆ. ತೆಕ್ಕಟ್ಟೆಯ ಶಂಕರ ದೇವಾಡಿಗ ಅವರು ತಮ್ಮ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕುಟುಂಬದ ಆರು ಮಂದಿ ಸದಸ್ಯರೊಂದಿಗೆ ಶಿವಮೊಗ್ಗದಲ್ಲಿರುವ ಮಗಳ ಮನೆಗೆ ತೆರಳುತ್ತಿದ್ದರು.
ಕಾರು ನೀರಿನಲ್ಲಿ ಮುಳುಗುತ್ತಿದ್ದಂತೆಯೇ ಸ್ಥಳೀಯರು ರಕ್ಣಣೆಗೆ ಮುಂದಾಗಿದ್ದಾರೆ. ಆದರೆ, ಮಹಿಳೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅಪಘಾತದಲ್ಲಿ ಪೆಟ್ಟಾಗಿ ಅವರ ಸಾವು ಸಂಭವಿಸಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಅಪಘಾತದಿಂದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕ್ರೇನ್ ಸಹಾಯದಿಂದ ನದಿಯಿಂದ ಹೊರತೆಗೆಯಲಾಯಿತು. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
