Wednesday, February 11, 2026
Homeಜಿಲ್ಲಾಸುದ್ದಿಜೋಳದಾಳ್ ವೃತ್ತದಲ್ಲಿ ಬಾಳೆಗಿಡ ನೆಟ್ಟು ರಸ್ತೆತಡೆ ನಡೆಸಿ ವಿನೂತನ ಪ್ರತಿಭಟನೆ!  

ಜೋಳದಾಳ್ ವೃತ್ತದಲ್ಲಿ ಬಾಳೆಗಿಡ ನೆಟ್ಟು ರಸ್ತೆತಡೆ ನಡೆಸಿ ವಿನೂತನ ಪ್ರತಿಭಟನೆ!  

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಮಳೆ ಬಿದ್ದ ಪರಿಣಾಮ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಕೂಡಲೇ ರಸ್ತೆಗಳನ್ನು ದುರಸ್ಥಿಪಡಿಸಬೇಕೆಂದು ಆಗ್ರಹಿಸಿ ಇಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಜೋಳದಾಳ್ ವೃತ್ತದಲ್ಲಿ ಬಾಳೆಗಿಡ ನೆಟ್ಟು ರಸ್ತೆತಡೆ ನಡೆಸಿ ವಿನೂತನ ಪ್ರತಿಭಟನೆ ನಡೆಸಿದರು.

ಬಿಜೆಪಿ ಆಲ್ದೂರು ಮಂಡಲ ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ಇಂದು ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಆಯೋಜಿಸಲಾಗಿದ್ದ ರಸ್ತೆ ತಡೆ ಪ್ರತಿಭಟನೆಯಲ್ಲಿ ನೂರಾರು ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಪರಾಜಿತ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಸರ್ಕಾರ ಬಂದು ಎರಡೂವರೆ ವರ್ಷಗಳಾದರೂ ರಸ್ತೆಗಳ ಗುಂಡಿ ಮುಚ್ಚಿಲ್ಲ. ಶೀಘ್ರವೇ ರಸ್ತೆಗಳ ಗುಂಡಿಯನ್ನು ಮುಂಚಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದ ಅವರು, ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಎಂದು ಆರೋಪಿಸಿದರು.

ಶಾಸಕರು ಮತ್ತು ಜಿಲ್ಲಾ ಸಚಿವರು ಕ್ಷೇತ್ರ ಪ್ರವಾಸ ಕೈಗೊಂಡು ಜನಸಾಮಾನ್ಯರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಇನ್ನು 15 ದಿನಗಳೊಳಗೆ ರಸ್ತೆಗಳನ್ನು ಅಭಿವೃದ್ಧಿಪಡಿಸದಿದ್ದರೆ ಇಡೀ ಕ್ಷೇತ್ರ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪಂಚ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿ ಮತದಾರರಿಗೆ ಮೋಸ ಮಾಡುತ್ತಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಜೊತೆಗೆ ಕಾಡುಪ್ರಾಣಿಗಳ ದಾಳಿಯಿಂದ ಜನಸಾಮಾನ್ಯರು ತತ್ತರಿಸಿದ್ದು, ಜೀವ ಭಯದಲ್ಲಿದ್ದಾರೆಂದರು.

ಪರಿಶಿಷ್ಟ ಜಾತಿ, ಪಂಗಡದ ಪರವಾಗಿ ಇದೆ ಎಂದು ಹೇಳುವ ಸರ್ಕಾರ ಎಸ್‌ಸಿ, ಟಿಎಸ್‌ಪಿ ೩೯ ಸಾವಿರ ಕೋಟಿ ರೂಗಳನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ. ಇದು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ಗೆ ಮಾಡಿದ ಅವಮಾನ. ದಲಿತರು ಮತ್ತು ಹಿಂದುಳಿದವರಿಗೆ ಮಾಡಿದ ಅಪಮಾನ ಎಂದು ಆರೋಪಿಸಿದರು.

ಜೆಡಿಎಸ್-ಬಿಜೆಪಿ ಒಗ್ಗೂಡಿದರೆ ರಾಜ್ಯದಲ್ಲಿ ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಿ.ಟಿ. ರವಿ, ಎಂ.ಕೆ. ಪ್ರಾಣೇಶ್ ಉತ್ತಮ ಆಡಳಿತ ನಡೆಸಿದ್ದಾರೆ ಎಂದು ಶ್ಲಾಘಿಸಿದರು.

ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ ಸುರೇಶ್ ಮಾತನಾಡಿ, ರಸ್ತೆಗಳು ಗುಂಡಿಬಿದ್ದು ಅಪಘಾತ ಸೃಷ್ಟಿಸುವತ್ತ ಪರಿವರ್ತನೆಯಾಗಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಸರ್ಕಾರ ಪರ್ಸೆಂಟೇಜ್‌ನಲ್ಲಿ ತೊಡಗಿರುವುದರಿಂದ ಅಭಿವೃದ್ಧಿಯಲ್ಲಿ ಶೂನ್ಯವಾಗಿದೆ ಎಂದು ದೂರಿದರು. ಸರ್ಕಾರ ಮತ್ತು ಅರಣ್ಯ ಇಲಾಖೆ ಕಾಡುಪ್ರಾಣಿಗಳ ಹಾವಳಿ ತಡೆಯುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.

ಭಾರತೀಯ ಜನತಾ ಪಕ್ಷ ಹಾಗೂ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಒಗ್ಗಟ್ಟಿನಿಂದ ಕೆಲಸವನ್ನು ಮಾಡುತ್ತಿದೆ, ನಮ್ಮ ಹೋರಾಟ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಆಲ್ದೂರು-ಬಾಳೊಹೊನ್ನೂರು ರಸ್ತೆಯಲ್ಲಿರುವ ಪ್ರತಿಯೊಂದು ಗುಂಡಿಗಳಿಗೂ ಒಂದೊಂದು ಹೆಸರುಗಳನ್ನಿಟ್ಟು ಸರಣಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳಿಗೆ ಅನುದಾನ ನೀಡುತ್ತಿಲ್ಲ, ಗ್ರಾಮ ಪಂಚಾಯಿತಿಗಳು ನಿಷ್ಕ್ರಿಯಗೊಂಡಿವೆ, ಇದೇ ರೀತಿಯ ಇನ್ನೂ ಅನೇಕ ಸಮಸ್ಯೆಗಳಿಗೆ ಕಾಂಗ್ರೆಸ್ ಸರ್ಕಾರ ಸ್ಪಂದಿಸುತ್ತಿಲ್ಲ, ಗ್ಯಾರಂಟಿ ಯೋಜನೆಯ ಮೂಲಕ ಅಧಿಕಾರಕ್ಕೆ ಬಂದಿರುವ ಅವರು ಗ್ಯಾರಂಟಿ ಯೋಜನೆಗಳ ಜೊತೆಯಲ್ಲಿ, ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಈ ಮೂಲಕ ಸರ್ಕಾರಕ್ಕೆ ತಿಳಿಸಿದರು.

ಬಿಜೆಪಿ ಮುಖಂಡರುಗಳಾದ ಪ್ರಸನ್ನ, ಬೂತನಕಾಡು ನಾಗೇಶ್, ಎನ್.ಎಂ.ಮಂಜುನಾಥ್, ಬೈಗೂರು ನಾಗೇಶ್, ಮೈಲಿಮನೆ ಕೃಷ್ಣಮೂರ್ತಿ, ಕುರುವಂಗಿ ವೆಂಕಟೇಶ್, ರವೀಂದ್ರ, ಅರವಿಂದ, ಸುಮಂತ್, ಭವ್ಯ ನಟೇಶ್, ಜ್ಯೋತಿ ಸುರೇಶ್, ಜೆಡಿಎಸ್‌ನ ಹೆಚ್.ಎನ್ ಕೃಷ್ಣೇಗೌಡ, ಸತೀಶ್, ರುದ್ರೇಗೌಡ, ನಂದನ್, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!