ಚಿಕ್ಕಮಗಳೂರು: ಆಗಸ್ಟ್ 13ರಂದು ನಡೆದ ಸಂಸೆ ಯುವಕ ನಾಗೇಶ್ ಆತ್ಮಹತ್ಯೆ ಘಟನೆಗೆ ಸಂಬಂಧಿಸಿದಂತೆ ಕುದುರೆಮುಖ ಪೊಲೀಸ್ ಠಾಣೆಯ ಪೇದೆ ಸಿದ್ದೇಶ್ ಅವರನ್ನ ಗೋವಾದಲ್ಲಿ ಅರೆಸ್ಟ್ ಮಾಡಲಾಗಿದೆ.
ಕುದುರೆಮುಖ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕುದುರೆಮುಖ ಪೊಲೀಸ್ ಠಾಣೆಯ ಪೇದೆ ಸಿದ್ಧೇಶ್ ನನ್ನು ಚಿಕ್ಕಮಗಳೂರು ಪೊಲೀಸರು ನೇಮಿಸಿದ್ದ ವಿಶೇಷ ತಂಡ ಗೋವಾದಲ್ಲಿ ಅರೆಸ್ಟ್ ಮಾಡಲಾಗಿದೆ.
ಘಟನೆ ಹಿನ್ನೆಲೆ:
ಸಂಸೆ ಗ್ರಾಮದ ಬಸ್ತಿಗದ್ದೆ ನಿವಾಸಿ ದಲಿತ ಸಮುದಾಯಕ್ಕೆ ಸೇರಿದ ನಾಗೇಶ್ ಆತ್ಮಹತ್ಯೆಗೆ ಶರಣಾಗಿರುವ ಯುವಕ. ‘ಜುಲೈ 15ರಂದು ರಾತ್ರಿ 10.30ರ ಸುಮಾರಿನಲ್ಲಿ ಆಟೊರಿಕ್ಷಾದಲ್ಲಿ ತೆರಳುತ್ತಿದ್ದಾಗ ಕುದುರೆಮುಖ ಠಾಣೆಯ ಕಾನ್‌ಸ್ಟೆಬಲ್ ಸಿದ್ದೇಶ್ ಮತ್ತು ಇಬ್ಬರು ಸ್ಥಳೀಯರು ದಾರಿಗೆ ಅಡ್ಡಲಾಗಿ ವಾಹನ ನಿಲ್ಲಿಸಿಕೊಂಡು ನಿಂತಿದ್ದರು.
ರಿಕ್ಷಾದಿಂದ ಇಳಿದು ಮೊಬೈಲ್ ಫೋನ್‌ನಲ್ಲಿ ಟಾರ್ಚ್ ಹಾಕಿಕೊಂಡು ಸಮೀಪಕ್ಕೆ ಹೋದಾಗ ನಾವು ಮದ್ಯ ಸೇವಿಸುತ್ತಿರುವ ದೃಶ್ಯ ಸೆರೆ ಹಿಡಿಯುತ್ತೀಯಾ ಎಂದು ಪ್ರಶ್ನಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು’ ಎಂದು ನಾಗೇಶ್ ದೂರು ನೀಡಿದ್ದರು. ಬಳಿಕ ಒಂದು ವಾರ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ದೂರಿನ ಬೆನ್ನಲ್ಲೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಕುದುರೆಮುಖ ಪೊಲೀಸರು ನಾಗೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಅವರ ಆಟೊರಿಕ್ಷಾ ಮತ್ತು ಅಡಿಕೆಗೆ ಔಷಧಿ ಸಿಂಪಡಿಸುವ ಯಂತ್ರ ವಶಪಡಿಸಿಕೊಂಡಿದ್ದರು ಎನ್ನಲಾಗಿದೆ
