ಹಾಸನ/ಬೇಲೂರು: ಬೇಲೂರು ತಾಲೂಕಿನ ಅಂಕಿಹಳ್ಳಿಯಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ಪಕ್ಕದ ಗಜೇಂದ್ರಪುರ ಗ್ರಾಮದ ಚಂದ್ರಮ್ಮ(45) ಮೃತ ದುರ್ದೈವಿ. ಡಾ.ಕರುಣ್ ಎಂಬುವವರ ಕಾಫಿತೋಟದಲ್ಲಿ ಕೂಲಿ ಕೆಲಸ ಮಾಡ್ತಿದ್ದ ಮಹಿಳೆಯನ್ನ ಕಾಡಾನೆ ಸೊಂಡಿಲಿನಿಂದ ಎತ್ತಿ ಬಿಸಾಕಿ, ಕಾಲಿನಿಂದ ತುಳಿದು ಬರ್ಬರವಾಗಿ ಸಾಯಿಸಿದೆ.

ಹೊಟ್ಟೆಪಾಡಿಗಾಗಿ ದಿನನಿತ್ಯ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯ ದಾರುಣ ಸ್ಥಿತಿ ನೋಡಿ ಜನರು ಕಣ್ಣೀರಿಟ್ಟಿದ್ದಾರೆ. ಬೇಲೂರು-ಸಕಲೇಶಪುರ ಭಾಗದಲ್ಲಿ ನಿರಂತರ ಕಾಡಾನೆ ದಾಳಿ ನಡೆಯುತ್ತಿದ್ದರೂ ಅರಣ್ಯ ಸಚಿವರು, ಅಧಿಕಾರಿಗಳು, ಸಿಬ್ಬಂದಿಗಳು ಗಮನವಹಿಸುತ್ತಿಲ್ಲ ಅಂತಾ ಜನರು ಆಕ್ರೋಶ ಹೊರಹಾಕಿದ್ದಾರೆ. ಇಷ್ಟೇ ಅಲ್ಲದೇ ಸ್ಥಳಕ್ಕೆ ಅರಣ್ಯ ಸಚಿವರು ಬರಬೇಕು, ಅಲ್ಲಿವರೆಗೂ ಮೃತದೇಹವನ್ನ ಮೇಲೆ ಎತ್ತಲು ಬಿಡೋದಿಲ್ಲ ಅಂತಾ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಪೊಲೀಸ್ ಬಂದ್ ಬಸ್ತ್ ಮಾಡಲಾಗಿದೆ.

