ದಕ್ಷಿಣ ಕನ್ನಡ: ಈಗ ಒಂದೊಂದೇ ಸತ್ಯಗಳು ಹೊರಗೆ ಬರುತ್ತಿದೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಬಂಧನದ ಬಳಿಕ ಮಾತನಾಡಿದ ಅವರು, ಎಸ್‌ಐಟಿ ತನಿಖೆ ಹಂತದಲ್ಲಿ ನಾನು ಹೆಚ್ಚು ಮಾತನಾಡಲ್ಲ. ಧರ್ಮಸ್ಥಳಕ್ಕೆ ಬಂದು ಬೆಂಬಲ ಸೂಚಿಸುವ ಎಲ್ಲರಿಗೂ ಧನ್ಯವಾದಗಳು ಎಂದರು.
ಸತ್ಯಗಳನ್ನು ತೊಳೆದು ಇಟ್ಟಂತಾಗಿದೆ. ಕ್ಷೇತ್ರದ ಮೇಲಿನ ಅಭಿಮಾನ ಹೀಗೇ ಇರಲಿ. ಎಲ್ಲರ ಪ್ರೀತಿ ವಿಶ್ವಾಸ ಹೀಗೆಯೇ ಇರಲಿ ಎಂದು ಆಶಿಸುತ್ತೇನೆ ಎಂದು ಭಕ್ತರ ಬಳಿ ಮಾತನಾಡಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಬುರುಡೆ ಬಿಟ್ಟಿದ್ದ ಮಾಸ್ಕ್ ಮ್ಯಾನ್ ಚಿನ್ನಪ್ಪ ಅಲಿಯಾಸ್ ಚೆನ್ನನನ್ನು ಎಸ್‌ಐಟಿ ಬಂಧಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೀರೇಂದ್ರ ಹೆಗ್ಗಡೆಯವರು ಈ ಮೊದಲು ಅಣ್ಣಪ್ಪ ಸ್ವಾಮಿಯ ಪವಾಡದ ಬಗ್ಗೆ ಮಾತನಾಡಿದ್ದ ವೀಡಿಯೋ ಮತ್ತೆ ವೈರಲ್ ಆಗಿದೆ.
ಹೌದು, ಮಾಸ್ಕ್ ಮ್ಯಾನ್ ಬಂಧನವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ಭಕ್ತರು ಧರ್ಮ ವಿಜಯ ಆಚರಿಸುತ್ತಿದ್ದಾರೆ. ಈ ಬೆನ್ನಲ್ಲೇ ವೀರೇಂದ್ರ ಹೆಗ್ಗಡೆಯವರು ಅಣ್ಣಪ್ಪ ಸ್ವಾಮಿಯ ಪವಾಡದ ಬಗ್ಗೆ ಈ ಮೊದಲು ಮಾತನಾಡಿದ್ದ ವೀಡಿಯೋ ಮತ್ತೆ ವೈರಲ್ ಆಗುತ್ತಿದೆ. ಇದು ಅಣ್ಣಪ್ಪ ಸ್ವಾಮಿಯ ಸತ್ಯ ದರ್ಶನ ಎಂಬ ಹೆಗ್ಗಡೆಯವರ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಧರ್ಮಸ್ಥಳದಲ್ಲಿ ಮಂಜುನಾಥ ಅನುಗ್ರಹ ನೀಡುವ ದೇವರು. ಮಂಜುನಾಥನಿಗೆ ಕೋಪ ಬರಲ್ಲ, ಆದ್ರೆ ಅಣ್ಣಪ್ಪ ಸ್ವಾಮಿ ಕೋಪಿಷ್ಟ. ಅನ್ಯಾಯಿಗಳನ್ನು ಅಧರ್ಮಿಗಳನ್ನು ಶಿಕ್ಷಿಸದೇ ಅಣ್ಣಪ್ಪ ಬಿಡಲ್ಲ. ಧರ್ಮದೇವತೆಗಳ ಬಂಟ ಅಣ್ಣಪ್ಪ ಸ್ವಾಮಿಯ ಪವಾಡವಿದು. ಅಣ್ಣಪ್ಪ ಸ್ವಾಮಿ ಧರ್ಮಸ್ಥಳ ದೇಗುಲದ ಕಾವಲುಗಾರ ಅನ್ನೋ ನಂಬಿಕೆಯಿದೆ ಎಂದು ಈ ಹಿಂದೆ ಹೆಗ್ಗಡೆಯವರು ಹೇಳಿದ್ದರು.
