ಚಿಕ್ಕಮಗಳೂರು: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮಿನಿ ಕಾರೊಂದು ಚಾಲಕನ ಅಜಾಗರೂಕ ಚಾಲನೆಯಿಂದ ಪಲ್ಟಿಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ದಿಣ್ಣೆಕೆರೆ ಗ್ರಾಮದ ಸಮೀಪ ಸಂಭವಿಸಿದ್ದು ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದರೂ, ವಾಹನದಲ್ಲಿ ಪ್ರಯಾಣಿಸುತ್ತಿದ್ದ 12 ಪುಟಾಣಿಗಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

ಮಾಹಿತಿಯ ಪ್ರಕಾರ, ಕೂದುವಳ್ಳಿಯ ‘ಲಿಟಲ್ ಫ್ಲವರ್’ ಪ್ಲೇ ಹೋಮ್‌ಗೆ ಸೇರಿದ ಓಮಿನಿ ಕಾರು ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವೇಳೆ ಅಪಘಾತಕ್ಕೀಡಾಗಿದೆ. ಘಟನೆಯ ವೇಳೆ ವಾಹನದಲ್ಲಿ 12 ಮಕ್ಕಳು ಇದ್ದರು ಎನ್ನಲಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರು ಸ್ಥಳಕ್ಕೆ ಧಾವಿಸಿ ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ, ಮಕ್ಕಳನ್ನು ಕರೆದೊಯ್ಯಲು ಕಡ್ಡಾಯವಾಗಿ ವಾಣಿಜ್ಯ (ಕಮರ್ಷಿಯಲ್) ವಾಹನ ಬಳಸಬೇಕಾದ ನಿಯಮವಿದ್ದರೂ, ಹಲವು ವರ್ಷಗಳಿಂದ ಖಾಸಗಿ ನೋಂದಣಿಯ (ವೈಟ್ ಬೋರ್ಡ್) ವಾಹನವನ್ನು ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಗೆ ಪೂರ್ಣ ಪ್ರಮಾಣದ ಚಾಲನಾ ಪರವಾನಗಿ ಇರಲಿಲ್ಲ, ಕೇವಲ ಲರ್ನರ್ಸ್ ಲೈಸೆನ್ಸ್ (LLR) ಹೊಂದಿದ್ದ ಎನ್ನುವ ಮಾಹಿತಿ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇದಕ್ಕೂ ಮೀರಿಯಾಗಿ ವಾಹನದ ವಿಮೆ (ಇನ್ಸೂರೆನ್ಸ್) ಅವಧಿ ಮುಗಿದಿರುವುದಾಗಿ ತಿಳಿದುಬಂದಿದ್ದು, ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಪ್ಲೇ ಹೋಮ್ ಆಡಳಿತ ಮಂಡಳಿ ವಿರುದ್ಧ ಸೂಕ್ತ ತನಿಖೆ ನಡೆಸಿ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಈ ಕುರಿತು ಪರಿಶೀಲನೆ ನಡೆಸುವ ನಿರೀಕ್ಷೆಯಿದೆ.
