Wednesday, August 19, 2026
Homeಕ್ರೈಮ್ಪತ್ನಿಗೆ ಕಿರುಕುಳ ಆರೋಪ: ಕೋಟ್ಯಾಂತರ ರೂ. ಹಣ ದೋಚಿ, ಚಿನ್ನಾಭರಣ ಸಮೇತ ಮಗನೊಂದಿಗೆ ಪತಿ ಎಸ್ಕೇಪ್!

ಪತ್ನಿಗೆ ಕಿರುಕುಳ ಆರೋಪ: ಕೋಟ್ಯಾಂತರ ರೂ. ಹಣ ದೋಚಿ, ಚಿನ್ನಾಭರಣ ಸಮೇತ ಮಗನೊಂದಿಗೆ ಪತಿ ಎಸ್ಕೇಪ್!

Telegram Group
Join Now

ಕೊಪ್ಪ: ಪತಿಯೊಬ್ಬ ತನ್ನ ಪತ್ನಿಗೆ ದೀರ್ಘಕಾಲದಿಂದ ದೈಹಿಕ, ಮಾನಸಿಕ ಹಿಂಸೆ ನೀಡಿ, ಕೋಟ್ಯಂತರ ರೂಪಾಯಿ ಹಣ, ಚಿನ್ನಾಭರಣ ದೋಚಿ, ಮಗನನ್ನು ಬಲವಂತವಾಗಿ ಕರೆದೊಯ್ದಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಎರಾಲ್ ರೋಹನ್ ಡಿಕುನ್ನಾ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಗಳೂರು ಮೂಲದ ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, ಪ್ರೀತಿಸಿ ಮದುವೆಯಾಗಿದ್ದ ದಂಪತಿ ಕತಾರ್‌ನಲ್ಲಿ ನೆಲೆಸಿದ್ದರು. ಮದುವೆ ಸಮಯದಲ್ಲಿ ವರದಕ್ಷಿಣೆ ರೂಪದಲ್ಲಿ 160 ಗ್ರಾಂ ಚಿನ್ನಾಭರಣ ಪಡೆದಿದ್ದ ಪತಿ, ನಂತರದ ದಿನಗಳಲ್ಲಿ ಹಣಕ್ಕಾಗಿ ಪೀಡಿಸಿ, ಪತ್ನಿಯ ಕೈಯಿಂದ ಕೆಲಸ ಮಾಡಿಸಿ, ಆಕೆಯ ಸಂಪಾದನೆಯ ಸುಮಾರು ₹8 ಕೋಟಿ ಹಣವನ್ನು ಸುಲಿಗೆ ಮಾಡಿಕೊಂಡಿದ್ದಾನೆ ಎಂದು ದೂರಲಾಗಿದೆ.

ಹಣಕ್ಕಾಗಿ ನಿರಂತರ ಹಲ್ಲೆ ನಡೆಸಿ, ಚಾಕುವಿನಿಂದ ಕೊಲೆ ಮಾಡಲು ಯತ್ನಿಸಿದ್ದಲ್ಲದೆ, ಜಗಳ ಬಿಡಿಸಲು ಬಂದ ಮಕ್ಕಳ ಮೇಲೂ ಹಲ್ಲೆ ನಡೆಸಿ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆಗಸ್ಟ್ 3ರಂದು ಆಸ್ಪತ್ರೆಗೆಂದು ಕರೆದೊಯ್ದು ತಾಯಿ ಮತ್ತು ಮಗಳನ್ನು ಅಲ್ಲಿಯೇ ಬಿಟ್ಟು, 9 ವರ್ಷದ ಮಗನನ್ನು ಪುಸಲಾಯಿಸಿ ಕರೆದುಕೊಂಡು ಪತಿ ಭಾರತಕ್ಕೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಅಲ್ಲದೆ, ಮನೆಯಲ್ಲಿದ್ದ ಸಿಸಿಟಿವಿ ಸಂಪರ್ಕ ಕಡಿತಗೊಳಿಸಿ, ಸುಮಾರು 300 ಗ್ರಾಂ ಚಿನ್ನಾಭರಣ, 2 ಚಿನ್ನದ ಬಿಸ್ಕೆಟ್‌ಗಳು, ₹65 ಲಕ್ಷ ನಗದು, ಆಸ್ತಿ ದಾಖಲೆಗಳು ಹಾಗೂ ಪಾಸ್‌ಪೋರ್ಟ್‌ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರುದಾರೆ ತಿಳಿಸಿದ್ದಾರೆ.

ನಂತರ ಕತಾರ್‌ನ ಭಾರತೀಯ ರಾಯಭಾರ ಕಚೇರಿಯಿಂದ ತಾತ್ಕಾಲಿಕ ಪಾಸ್‌ಪೋರ್ಟ್ ಪಡೆದು ಮಂಗಳೂರಿಗೆ ಮರಳಿದ ಸಂತ್ರಸ್ತೆ, ಪತಿಯ ಜೊತೆಗೆ ಆತನ ಕೃತ್ಯಕ್ಕೆ ಸಾಥ್ ನೀಡಿ ಮಾನಸಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಅತ್ತೆ ಮೇರಿ ಮೇಗ್ನಲಿನ್ ಡಿಕುನ್ಹಾ, ಗಂಡನ ಅಣ್ಣ ಎಜಿಲ್ ಶರಣ್ ಡಿಕುನ್ನಾ ಹಾಗೂ ನಾದಿನಿ ಪ್ರೀಮಲ್ ವಿವಿನ್ ಪಿಂಟೋ ವಿರುದ್ಧವೂ ಜಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments