ಚಿಕ್ಕಮಗಳೂರು: ರಾಜ್ಯದ ಜನ್ರೇ ಒಮ್ಮೆ ಇಲ್ಲಿ ಗಮನಿಸಿ. ಮೆಡಿಕಲ್ ಗಳಲ್ಲಿ ಅಗತ್ಯ ಔಷಧಿಗಳು ಏನಾದ್ರೂ ಖರೀದಿ ಮಾಡೋದಿದ್ರೆ ಇಂದು ಖರೀದಿಸಿ. ನಾಳೆ ರಾಜ್ಯದಾದ್ಯಂತ ಮೆಡಿಕಲ್ ಶಾಪ್‌ಗಳು ಬಂದ್ ಆಗಲಿವೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಹಾಗೂ ಕೆ.ಸಿ.ಡಿ.ಎ. ಬೆಂಗಳೂರು ನೀಡಿರುವ ಕರೆ ಮೇರೆಗೆ ದೇಶಾದ್ಯಂತ ಹಮ್ಮಿಕೊಂಡಿರುವ ಒಂದು ದಿನದ ಸಾಂಕೇತಿಕ ಮುಷ್ಕರಕ್ಕೆ ಮಲೆನಾಡು ಔಷಧಿ ವ್ಯಾಪಾರಿಗಳ ಸಂಘ ಸಂಪೂರ್ಣ ಬೆಂಬಲ ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೊಪ್ಪ ಹಾಗೂ ಶೃಂಗೇರಿ ತಾಲೂಕಿನಾದ್ಯಂತ ಎಲ್ಲಾ ಮೆಡಿಕಲ್ ಶಾಪ್ ಸಂಪೂರ್ಣ ಬಂದ್ ಮಾಡಲು ಸಂಘವು ಸರ್ವಾನುಮತದ ತೀರ್ಮಾನ ಕೈಗೊಂಡಿದೆ.
ಆನ್‌ಲೈನ್‌ನಲ್ಲಿ ಔಷಧಿ ಮಾರಾಟಕ್ಕೆ ಕೇಂದ್ರ ಸರ್ಕಾರ ಕೋವಿಡ್ ಸಮಯದಲ್ಲಿ ಅನುಮತಿಯನ್ನ ನೀಡಲಾಗಿತ್ತು. ಅದನ್ನೇ ಮುಂದುವರೆಸಿದ ಕೆಲ ಆಪ್ ಆಧಾರಿತ ಕಂಪನಿಗಳು ಇದನ್ನೇ ಬ್ಯುಸಿನೆಸ್ ಮಾಡಿಕೊಂಡಿವೆ. ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲಾಗಿತ್ತು. ಆದ್ರೂ ಯಾವ್ದೇ ಪ್ರಯೋಜನ ಆಗದ ಹಿನ್ನಲೆ, ದೇಶದ್ಯಾಂತ ಇರುವ 12.4 ಲಕ್ಷಕ್ಕೂ ಅಧಿಕ ಮೆಡಿಕಲ್‌ಗಳ ಬಂದ್ ಕರೆ ನೀಡಲಾಗಿದೆ.
ಪ್ರಮುಖ ಬೇಡಿಕೆಗಳು ಏನು..?
* ಜಿಎಸ್‌ಆರ್ 220 (ಇ) ಹಿಂಪಡೆಯಬೇಕು
* ಜಿಎಸ್‌ಆರ್ 817 (ಇ) ಹಿಂಪಡೆಯಬೇಕು
* ಅಕ್ರಮ ಇ-ಫಾರ್ಮಸಿಗಳನ್ನು ಬಂದ್ ಮಾಡಬೇಕು
* ಅತಿಯಾದ ಡಿಸ್ಕೌಂಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
* ಸಣ್ಣ ಔಷಧಿ ವ್ಯಾಪಾರಿಗಳನ್ನು ರಕ್ಷಿಸಬೇಕು
* ಎಂಬ ಬೇಡಿಕೆಗಳನ್ನು ಇಟ್ಟಿದ್ದಾರೆ.
