ಮೂಡಿಗೆರೆ: ಶಾಸಕಿ ನಯನಾ ಮೋಟಮ್ಮ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದಾರೆಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ದೂರು ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಹೌದು..ನಯನಾ ಮೋಟಮ್ಮ ಅವರು ಶಾಸಕರಾದ ಬಳಿಕ ಪಕ್ಷದ ಅಧಿಕೃತ ಕಚೇರಿಗೆ ಒಮ್ಮೆಯೂ ಆಗಮಿಸಿಲ್ಲ. ಅಲ್ಲದೇ ಅವರ ನಿವಾಸದಲ್ಲಿಯೇ ಗೃಹ ಕಚೇರಿ ತೆರೆದಿದ್ದು, ಪಕ್ಷದ ಕಾರ್ಯಕರ್ತರು ಭೇಟಿ ನೀಡುವುದು ಕಷ್ಟವಾಗಿದೆ. ಪಕ್ಷಕ್ಕಾಗಿ ದುಡಿದ ಹಿರಿಯ ಮುಖಂಡರನ್ನು ಕಡೆಗಣಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಸ್ಪಷ್ಟ ನಿರ್ದೇಶನ ನೀಡಿದ್ದರೂ ಸಮನ್ವಯ ಸಮಿತಿ ರಚನೆ ಮಾಡಿಲ್ಲ. ಸರಕಾರದ ನಾಮ ನಿರ್ದೇಶನಗಳನ್ನು ಏಕಪಕ್ಷೀಯವಾಗಿ ಪಟ್ಟಿ ತಯಾರಿಸಿ ಸರಕಾರದಿಂದ ಆದೇಶ ಮಾಡಿಸಿದ್ದಾರೆ.
ಮೂಡಿಗೆರೆಯಲ್ಲಿ ಹಿಂದೂ ಮಹಾಗಣಪತಿ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಅವರಿಗೆ ಅದ್ದೂರಿ ಸ್ವಾಗತ ನೀಡುವ ಜತೆಗೆ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಇದರಿಂದ ಕಾಂಗ್ರೆಸ್ ಬೆಂಬಲಿಸುವ ಮುಸ್ಲಿಂಮರಿಗೆ ನೋವುಂಟಾಗಿದೆ. ಹಬ್ಬ ಹಾಗೂ ಕಾರ್ಯಕ್ರಮಗಳಿಗೆ ಹಾಕಿಸುವ ಪ್ಲಕ್ಸ್‌ಗಳಲ್ಲಿ ಪಕ್ಷದ ಮುಖಂಡರ ಫೋಟೋ ಹಾಕಿಸದೇ ಮುಜುಗರ ಉಂಟಾಗುವಂತೆ ಮಾಡಿದ್ದಾರೆ. ಪಕ್ಷ ಮತ್ತು ಶಾಸಕರ ಹೊಂದಾಣಿಕೆ ಕೊರತೆ ಮುಂದುವರೆದರೆ ಮುಂಬರುವ ಚುನಾವಣೆಗಳನ್ನು ಎದುರಿಸಲು ಕಷ್ಟವಾಗುತ್ತದೆ ಎಂದು ಅನೇಕ ಅಂಶಗಳನ್ನು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಮುಖಂಡರಾದ ಎಂ.ಪಿ.ಮನು. ಬಿ.ಎಸ್.ಜಯರಾಂ. ಡಿ.ಕೆ.ಉದಯಶಂಕರ್. ಪ್ರಸನ್ನ ಮರಗುಂದ ಮತ್ತಿತರರಿದ್ದರು.
