ಮಂಗಳೂರು:ಪ್ರೀತಿ ನಿರಾಕರಿಸಿದ್ದಕ್ಕೆ ಬಸ್ ನಿಲ್ದಾಣದಲ್ಲಿ ಯುವತಿಯ ಮೇಲೆ ಮಚ್ಚಿನಿಂದ ದಾಳಿ ನಡೆಸಿ ಆರೋಪಿ ಪರಾರಿಯಾಗಿದ್ದು, ಗಂಭೀರ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಂಟ್ವಾಳದ ಕಕ್ಕೆಪದವು ನಿವಾಸಿ ಲಾವಣ್ಯ ಮೃತ ಯುವತಿ. ಯುವತಿಯ ದೂರದ ಸಂಬಂಧಿ ಚೇತನ್ ಹತ್ಯೆಗೈದ ಆರೋಪಿ. ಯುವತಿ ಪ್ರೀತಿ ನಿರಾಕರಿಸಿದರೂ ಪ್ರೀತಿಸುವಂತೆ ಆರೋಪಿ ಚೇತನ್ ಒತ್ತಾಯಿಸುತ್ತಿದ್ದ. ಗುರುವಾರ ಲಾವಣ್ಯ ಬಿ.ಸಿ ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಕ್ಕೆಪದವು ಹೋಗುವ ಬಸ್ಸಿನಲ್ಲಿ ಕುಳಿತಿದ್ದ ವೇಳೆ ಆಕೆಯನ್ನು ಹಿಂಬಾಲಿಸಿ ಬಂದ ಚೇತನ್ ಆಕೆಯನ್ನು ಬಸ್ಸಿನಿಂದ ಇಳಿಸಿ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ದಾಳಿ ನಡೆಸಿದ ಬಳಿಕ ಆರೋಪಿ ಪರಾರಿಯಾಗಿದ್ದಾನೆ.
ದಾಳಿಗೊಳಗಾಗಿ ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಬಂಟ್ವಾಳ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಸ್ಥಳಕ್ಕೆ ಧಾವಿಸಿದ್ದು, ಪರಾರಿಯಾದ ಯುವಕನ ಬಂಧನಕ್ಕೆ ಎರಡು ತಂಡಗಳನ್ನು ರಚಿಸಿದ್ದಾರೆ.
