ಚಿಕ್ಕಮಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ 250 ಕೋಟಿ ರೂ.ಗೂ ಅಧಿಕ ಹಗರಣ ನಡೆದಿದೆ ಎಂಬ ಆರೋಪವಿದೆ. ಈ ಬಗ್ಗೆ ಮುಖ್ಯಮಂತ್ರಿ ಏಕೆ ಮಾತನಾಡುತ್ತಿಲ್ಲ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಈ ಪ್ರಕರಣವನ್ನ ತಕ್ಷಣವೇ ಸಿಬಿಐ ತನಿಖೆಗೆ ವಹಿಸಬೇಕು. ರಾಜ್ಯ ಸರ್ಕಾರದ ಯಾವುದೇ ರೀತಿಯ ತನಿಖೆಯಿಂದಲೂ ಈ ಪ್ರಕರಣದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ. ಏಕೆಂದರೆ, ನಕಲಿ ಖಾತೆಗಳನ್ನು ಪತ್ತೆಹಚ್ಚಿದ್ದು ಸರ್ಕಾರವಲ್ಲ. ಬದಲಿಗೆ ಸಿಐಜಿ ಈ ವಂಚನೆಯನ್ನ ಬಯಲಿಗೆಳೆದಿದೆ. ಒಂದೇ ಬ್ಯಾಂಕ್ ಖಾತೆಗೆ ಸಾವಿರಾರು ಜನರ ಹಣ ವರ್ಗಾವಣೆಯಾಗಿದೆ ಎಂದರೆ ಇದು ಸಾಮಾನ್ಯ ಸಂಗತಿಯಲ್ಲ ಎಂದಿದ್ದಾರೆ.
ಈ ಭ್ರಷ್ಟಾಚಾರದ ಕುರಿತು ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳು ಮೌನ ವಹಿಸಿರುವುದು ಏಕೆ? ಹಿಂದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಮೌನವು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ನಕಲಿ ಖಾತೆಗಳ ಹಣದ ಪಾಲು ಆಳುವವರಿಗೂ ಸಿಕ್ಕಿದೆಯೇ ಎಂಬ ಸಂಶಯ ಮೂಡುತ್ತಿದ್ದು, ಗೃಹಲಕ್ಷ್ಮಿಯರ ಹೆಸರಿನಲ್ಲಿ ಹಣ ಲೂಟಿ ಮಾಡಿರುವುದು ರಾಜ್ಯದ ಗೃಹಲಕ್ಷ್ಮಿಯರಿಗೆ ಮಾಡಿದ ದ್ರೋಹ ಎಂದು ಕಿಡಿಕಾರಿದ್ದಾರೆ.
