ಚಿಕ್ಕಮಗಳೂರು: ಸಂಪೂರ್ಣ ಗೋಹತ್ಯೆ ಕಾಯ್ದೆ ಜಾರಿಯಲ್ಲಿದೆ. ಗೋಹಂತಕರನ್ನು ಪೊಲೀಸರು ಹದ್ದುಬಸ್ತಿನಲ್ಲಿಡುವ ಕೆಲಸವನ್ನು ಮಾಡದೇ ಇದ್ದರೆ ನಾವೇ ಆ ಕೆಲಸವನ್ನು ಮಾಡುತ್ತೇವೆ. ಹಿಂದೂ ಸಮಾಜಕ್ಕೆ ಆ ತಾಕತ್ತು ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಇತ್ತಿಚೆಗೆ ನಗರದಲ್ಲಿ ಗೋವಿನ ಬಾಲಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಘಟನೆ ಸೇರಿದಂತೆ ಗೋಹತ್ಯೆ, ಲವ್ಜಿಹಾದ್ ನಂತಹ ಪ್ರಕರಣಗಳನ್ನು ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಆಜಾದ್ ಪಾರ್ಕ್ ಸರ್ಕಲ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸಿದರೆ ಗೋರಕ್ಷಣೆಯಂತಹ ಕಾರ್ಯಕ್ಕೆ ಬಜರಂಗದಳದ ಕಾರ್ಯಕರ್ತರು ಮುಂದಾಗುವುದಿಲ್ಲ. ಗೋಹಂತಕರಿಂದ ಹಫ್ತಾ ವಸೂಲಿ ಮಾಡಿ ಸುಮ್ಮನಾದರೆ ನಿಮ್ಮ ಹೆಂಡತಿ, ಮಕ್ಕಳು ಸುಖವಾಗಿರಲು ಸಾಧ್ಯವಿಲ್ಲ ಎಂದರು.
ಉಪ್ಪಳ್ಳಿ ಬಳಿ ಅಕ್ರಮವಾದ ಮಸೀದಿ ನಿರ್ಮಾಣವಾಗುತ್ತಿದೆ. ಇಂದಿಗೂ ನ್ಯಾಯಬದ್ಧವಾದ ಅನುಮತಿ ಪಡೆದಿಲ್ಲ. ಜಿಲ್ಲಾಡಳಿತ ನಿಲ್ಲಿಸದೇ ಇದಲ್ಲಿ ನಾವೇ ನಿಲ್ಲಿಸಬೇಕಾಗಬಹುದು. ಜಿಲ್ಲಾಡಳಿತ ಕಾನೂನು ಪಾಲಿಸುವಂತೆ ನೋಡಿಕೊಂಡರೆ ಕೋಮು ಗಲಭೆ ಆಗುವುದಿಲ್ಲ ಎಂದು ಹೇಳಿದರು.
ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಗೋಹತ್ಯೆಯನ್ನು ನಿಷೇಧ ಮಾಡಿದ್ದರೂ, ಅಕ್ರಮ ಕಸಾಯಿಖಾನೆಗಳು ನಡೆಯುತ್ತಿವೆ ಎಂದರೆ ಅದು ಸಂವಿಧಾನ ವಿರೋಧಿ ಕೃತ್ಯ. ಅದನ್ನು ಮಾಡುತ್ತಿರುವವರಿಗೆ ಬುದ್ಧಿ ಕಲಿಸಬೇಕು ಎಂದು ಒತ್ತಾಯತಿಸುವುದು ಅಪರಾಧವೇ ಎಂದು ಪ್ರಶ್ನಿಸಿದರು.
ಗೋವಿಗೆ ಬೆಂಕಿ ಕೊಟ್ಟು ವಿಕೃತಿ ಮೆರೆದ ಕೃತ್ಯ ನಗರದಲ್ಲಿ ನಡೆದಿದೆ. ಅದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಅಪ್ರಾಪ್ತನಿಂದ ಈ ಕೆಲಸ ನಡೆದಿದ್ದರೆ ಅದಕ್ಕೆ ಕುಮ್ಮಕ್ಕು ಕೊಟ್ಟವರನ್ನು ಯಾಕೆ ಬಂಧಿಸಿಲ್ಲ ಹಾಗಿದ್ದರೆ ಗೋವಿನ ಹಿಂಸೆಯನ್ನು ತಡೆದವರ ಮೇಲೆ ಏಕೆ ಕೇಸು ದಾಖಲಿಸಿದ್ದೀರಿ ಎಂದು ಪ್ರಶ್ನಿಸಿದರು.
ನಗರದ ಕತ್ರಿಮಾರಮ್ಮ ದೇವಸ್ಥಾನದ ಬಳಿ ಗೋಪೂಜೆ ನೆರವೇರಿಸುವ ಮೂಲಕ ಪ್ರತಿಭಟನಾ ಮೆರವಣಿಗೆಗೆ ಸಿ.ಟಿ.ರವಿ ಚಾಲನೆ ನೀಡಿದರು. ಆಜಾದ್ ಪಾರ್ಕ್ವರೆಗೆ ಭಗವಾಧ್ವಜ ಹಿಡಿದು ಪ್ರತಿಭಟನೆ ನಡೆಸಲಾಯಿತು. ಗೋಹಂತಕರ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರಿಕಾಂತ್ ಪೈ, ಬಜರಂಗದಳದ ಶ್ಯಾಂ ವಿ.ಗೌಡ, ರಂಗನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
