ಚಿಕ್ಕಮಗಳೂರು: ಕಳೆದ ಎರಡು ವರ್ಷಗಳಿಂದ ಸಾರಿಗೆ ಸಂಸ್ಥೆಯ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸತತವಾಗಿ ಒತ್ತಾಯಿಸುತ್ತಾ ಬಂದಿದ್ದಾರೆ. ಈ ಹಿಂದೆ ಪ್ರತಿಭಟನೆಗೆ ಕರೆ ನೀಡಿದ್ದಾಗ, ಸಂಬಳ ಮತ್ತು ಸಾರಿಗೆ ಭತ್ಯೆಗಳ ಪರಿಷ್ಕರಣೆ ಮಾಡುವುದಾಗಿ ಸರ್ಕಾರ ನೀಡಿದ್ದ ಭರವಸೆಯ ಮೇರೆಗೆ ನೌಕರರು ಚಳುವಳಿಯನ್ನು ಹಿಂಪಡೆದಿದ್ದರು. ಆದರೆ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ, ಮೇ 20ರ ಬುಧವಾರದಿಂದ ಮತ್ತೊಮ್ಮೆ ಮುಷ್ಕರ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸಿ.ಟಿ. ರವಿ ಅವರು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹತ್ವದ ಮನವಿ ಮಾಡಿದ್ದಾರೆ. ನೀವು ವಿರೋಧ ಪಕ್ಷದಲ್ಲಿದ್ದಾಗ ಸಾರಿಗೆ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ಅವರ ಬೇಡಿಕೆಗಳ ಪರವಾಗಿ ಯಾವ ಧ್ವನಿಯಲ್ಲಿ ಮಾತನಾಡಿದ್ದೀರೋ, ಇಂದು ಅಧಿಕಾರದಲ್ಲಿದ್ದಾಗ ಅದೇ ರೀತಿಯಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸರ್ಕಾರ ಹೊಸದಾಗಿ ಏನನ್ನೂ ಮಾಡಬೇಕಾಗಿಲ್ಲ, ವಿರೋಧ ಪಕ್ಷದಲ್ಲಿದ್ದಾಗ ತಾವು ನೀಡಿದ್ದ ಭರವಸೆಗಳನ್ನು ಈಡೇರಿಸಿದರೆ ಸಾಕು ಎಂದು ಅವರು ಹೇಳಿದ್ದಾರೆ.
ಅನಗತ್ಯವಾಗಿ ಸಾರಿಗೆ ಮುಷ್ಕರ ನಡೆದು ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು. ಈಗಾಗಲೇ ಸಾಲು ಸಾಲು ಸಮಸ್ಯೆಗಳಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಈ ಮುಷ್ಕರದಿಂದ ಮತ್ತಷ್ಟು ಸಂಕಷ್ಟ ಎದುರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಸರ್ಕಾರ ಸಾರಿಗೆ ನೌಕರರ ಬಗ್ಗೆ ಸಹಾನುಭೂತಿ ತಳೆದು, ಅವರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು ಎಂದು ಸಿ.ಟಿ. ರವಿ ಅವರು ಆಗ್ರಹಿಸಿದ್ದಾರೆ.
