ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಟಿ.ಡಿ.ರಾಜೇಗೌಡ ಅವರು ಇತ್ತೀಚಿನ ರಾಜಕೀಯ ಮತ್ತು ಕಾನೂನು ಸಂಘರ್ಷಗಳ ನಡುವಿನ ಗೆಲುವಿನ ನಿಟ್ಟುಸಿರು ಬಿಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ದೆಹಲಿಯಿಂದ ಬಂದ ತಕ್ಷಣ ಶಕ್ತಿ ದೇವತೆ ಪುರದಮ್ಮನ ಸನ್ನಿಧಿಗೆ ಭೇಟಿ ನೀಡಿ ತನ್ನ ಹರಕೆ ತೀರಿಸಿದ್ದಾರೆ.
ಅಂಚೆ ಮತಗಳ ಮರುಎಣಿಕೆ ಸಂದರ್ಭದಲ್ಲಿ ಸಂಕಷ್ಟಗಳು ಎದುರಾಗಿದ್ದು ಹಾಗೆ ಎದುರಾಳಿ ಜೀವರಾಜ್ ಅವರ ಪರವಾಗಿ ಬಂದಿದ್ದ ಫಲಿತಾಂಶದಿಂದ ಸಾಕಷ್ಟು ಮನನೊಂದಿದ್ದರು. ಈ ಸಂಕಷ್ಟದ ದಿನದಲ್ಲಿ ದೇವಿಯ ಮೊರೆ ಹೋಗಿದ್ದರು. ಇದೀಗ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಸಿಕ್ಕ ಬೆನ್ನಲ್ಲೇ ಕುಟುಂಬ ಸದಸ್ಯರು ಸೇರಿ ದೇವಿಯ ವಿಶೇಷ ಪೂಜೆ ಹಾಗೂ ಹರಕೆ ತೀರಿಸಲು ಆಗಮಿಸಿದ್ದರು.
ಶಾಸಕರಾಗಿ ಮುಂದುವರೆಯುವ ಅವಕಾಶಕ್ಕಾಗಿ ಸಿಕ್ಕ ಖುಷಿಯಲ್ಲಿ ರಾಜೇಗೌಡ ಅವರು ಶಕ್ತಿ ದೇವತೆಗೆ ಪೂಜೆ ಸಲ್ಲಿಸಿ ನಮಿಸಿದರು.
