Monday, August 31, 2026
Homeಜಿಲ್ಲಾಸುದ್ದಿಹಿಂದುತ್ವಕ್ಕೆ ಬದ್ಧತೆ, ಅಭಿವೃದ್ಧಿಗೆ ಆದ್ಯತೆ: ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಸ್ವಾಗತಿಸಿದ ಡಾ. ಸಿ.ಟಿ.ರವಿ

ಹಿಂದುತ್ವಕ್ಕೆ ಬದ್ಧತೆ, ಅಭಿವೃದ್ಧಿಗೆ ಆದ್ಯತೆ: ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಸ್ವಾಗತಿಸಿದ ಡಾ. ಸಿ.ಟಿ.ರವಿ

Telegram Group
Join Now

ಚಿಕ್ಕಮಗಳೂರು: ಹುಲಿಕೆರೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಇಂದು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಅವರು ಪಕ್ಷದ ಧ್ವಜ ನೀಡಿ ನೂತನ ಕಾರ್ಯಕರ್ತರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು. “ಇವರೆಲ್ಲ ನಾನು ಚುನಾವಣೆಯಲ್ಲಿ ಸೋತಿರುವ ಅವಧಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಗೆದ್ದ ಎತ್ತಿನ ಬಾಲ ಹಿಡಿಯುವವರಲ್ಲ ಎಂಬುದನ್ನು ತೋರಿಸಿದ್ದಾರೆ. ಅವರನ್ನು ಪಕ್ಷಕ್ಕೆ ಪ್ರೀತಿಯಿಂದ ಸ್ವಾಗತಿಸುತ್ತೇನೆ” ಎಂದು ಹೇಳಿದರು.

ಅವರು ಚಿಕ್ಕಮಗಳೂರಿನ ತಮ್ಮ ನಿವಾಸದಲ್ಲಿ ಹುಲಿಕೆರೆ ಭಾಗದ ಕಾಂಗ್ರೆಸ್ ಮುಖಂಡರಾದ ಜಯಣ್ಣ ಮತ್ತು ಇತರ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ಕಳೆದ 20 ವರ್ಷಗಳ ಅವಧಿಯಲ್ಲಿ ನಾನು ಶಾಸಕನಾಗಿದ್ದಾಗ ಊರಿನ ಅಭಿವೃದ್ಧಿ ಮಾಡಿದ್ದನ್ನು ನೆನಪಿಟ್ಟುಕೊಂಡು, ನಾನು ಸೋತಿರುವ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸಿ ಸ್ವಾಗತಿಸುತ್ತೇನೆ. ಮುಂದಿನ ಚುನಾವಣೆಯ ಸಂದರ್ಭದಲ್ಲಿ ಬೂತ್‌ನಲ್ಲಿ ನಮ್ಮ ತಾಕತ್ತು ತೋರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ನಿಮ್ಮ ಬೆಂಬಲದ ನಿರೀಕ್ಷೆ ನನಗಿದೆ ಎಂದರು.

ಬೆರಟಿಕೆರೆ ಯೋಜನೆಯಡಿ 9.90 ಕೋಟಿ ರೂಪಾಯಿ ಮೌಲ್ಯದಲ್ಲಿ ಕೆರೆ ಅಭಿವೃದ್ಧಿಗಾಗಿ ಮೂರು ವರ್ಷಗಳ ಹಿಂದೆ ಅನುದಾನ ಮಂಜೂರು ಮಾಡಿಸಲಾಗಿತ್ತು. ಮೂರನೇ ಒಂದು ಭಾಗ ಹಣವನ್ನೂ ಬಿಡುಗಡೆಗೊಳಿಸಲಾಗಿತ್ತು. ದುರದೃಷ್ಟದ ಸಂಗತಿಯೆಂದರೆ ಅದು ಇಂದಿಗೂ ಪೂರ್ಣಗೊಂಡಿಲ್ಲ. ಅಯ್ಯನಕೆರೆ ಹೆಚ್ಚುವರಿ ಕೋಡಿ ಬಿದ್ದು ಹೋಗುವ ನೀರಿನ ಬಳಕೆಯ ಯೋಜನೆ ಇದಾಗಿದೆ. ಇಂದಿಗೂ ಪೂರ್ಣಗೊಂಡಿಲ್ಲ. ಇಚ್ಛಾಶಕ್ತಿ ಇದ್ದಿದ್ದರೆ ಆ ಕಾಮಗಾರಿ ಎರಡು ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು ಎಂದರು.

ಕನಕ ಭವನ, ಅಂಬೇಡ್ಕರ್ ಭವನ, ಕುರುಹಿನ ಶೆಟ್ಟಿ ಭವನ, ಕಲ್ಲೇಶ್ವರ ಸ್ವಾಮಿ ದೇವಸ್ಥಾನ, ಮಡಿವಾಳ ಸಮಾಜ, ನಾಯಕ ಸಮಾಜ, ಕೃಷ್ಣ ದೇವಸ್ಥಾನ, ಗೋಪಾಲಕೃಷ್ಣ ದೇವಸ್ಥಾನ ಹೀಗೆ ವಿವಿಧ ಸಮಾಜಗಳನ್ನು ಒಳಗೊಂಡಂತೆ ಬಹುತೇಕ ಯೋಜನೆಗಳಿಗೆ ಹಾಗೂ ರಸ್ತೆ ಅಭಿವೃದ್ಧಿಗೆ ಅನುದಾನ ತರಲಾಗಿತ್ತು. ಯಾರು ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದನ್ನು ಜನರು ತೀರ್ಮಾನಿಸುತ್ತಾರೆ. ನಮ್ಮ ರಾಜಕಾರಣ ಎಂದರೆ ಹಿಂದುತ್ವಕ್ಕೆ ಬದ್ಧತೆ, ಅಭಿವೃದ್ಧಿಗೆ ಆದ್ಯತೆ. ನಾನು ಎಂದಿಗೂ ಜಾತಿ ರಾಜಕಾರಣ ಮಾಡದೆ, ಪ್ರೀತಿ ರಾಜಕಾರಣ ಮಾಡಿದ್ದೇನೆ. ಈ ಅಭಿವೃದ್ಧಿ ರಾಜಕಾರಣಕ್ಕೆ, ನಮ್ಮ ಪಕ್ಷಕ್ಕೆ ಈ ಮುಖಂಡರ ಸೇರ್ಪಡೆ ಶಕ್ತಿ ತುಂಬಿದೆ ಎಂದು ರವಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಈಶ್ವರಹಳ್ಳಿ ಮಹೇಶ್, ಬಿಜೆಪಿ ಮುಖಂಡರುಗಳಾದ ರವಿ ಡಿ. ಕಾರೆಹಳ್ಳಿ, ನಿಶಾಂತ್, ದಿಲೀಪ್, ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments