Tuesday, September 22, 2026
Homeಜಿಲ್ಲಾಸುದ್ದಿಮೇಗಲಪೇಟೆ ಕುಡಿಯುವ ನೀರಿನ ಘಟಕ ಅವ್ಯವಸ್ಥೆ: ಪಾಚಿ ಕಟ್ಟಿದ ಟ್ಯಾಂಕ್‌ ಸ್ವಚ್ಛಗೊಳಿಸಲು ಸಾರ್ವಜನಿಕರ ಆಗ್ರಹ

ಮೇಗಲಪೇಟೆ ಕುಡಿಯುವ ನೀರಿನ ಘಟಕ ಅವ್ಯವಸ್ಥೆ: ಪಾಚಿ ಕಟ್ಟಿದ ಟ್ಯಾಂಕ್‌ ಸ್ವಚ್ಛಗೊಳಿಸಲು ಸಾರ್ವಜನಿಕರ ಆಗ್ರಹ

Telegram Group
Join Now

ಮೂಡಿಗೆರೆ : ಪಟ್ಟಣದ ಮೇಗಲಪೇಟೆಯಲ್ಲಿರುವ ಕುಡಿಯುವ ನೀರಿನ ಘಟಕ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಹೌದು ಪಟ್ಟಣದ ಸಾವಿರಾರು ಜನರು ಈ ನೀರಿನ ಘಟಕವನ್ನು ಅವಲಂಬಿಸಿದ್ದು,ಘಟಕದಲ್ಲಿರುವ ನೀರಿನ ತೊಟ್ಟಿಗೆ ಅಳವಡಿಸಿರುವ ಮೂರು ನಲ್ಲಿಗಳ ಪೈಕಿ ಯಾವುದಕ್ಕೂ ಸಮರ್ಪಕ ನಲ್ಲಿಗಳನ್ನ ಅಳವಡಿಸದಿರುವುದರಿಂದ ನೀರು ಪೋಲಾಗುತ್ತಿದೆ. ಬೆಳಿಗ್ಗೆ ಕುಡಿಯುವ ನೀರು ಪಡೆಯಲು ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಇದ್ದರೂ, ನೀರು ಪಡೆಯುವ ನಲ್ಲಿಗಳೇ ಸಮರ್ಪಕವಾಗಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮೂರು ನಲ್ಲಿಗಳ ಪೈಕಿ ಎರಡು ನಲ್ಲಿಗಳಿಗೆ ಪ್ಲಾಸ್ಟಿಕ್ ತುಂಡುಗಳನ್ನು ತುರುಕಲಾಗಿದ್ದು, ಮತ್ತೊಂದು ನಲ್ಲಿಗೆ ಮರದ ಕಡ್ಡಿ ಹಾಕಿ ನೀರು ತಡೆಹಿಡಿಯಲಾಗಿದೆ. ಇದರಿಂದ ನೀರು ವ್ಯರ್ಥವಾಗಿ ಹರಿದುಹೋಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಆತಂಕ ಎದುರಾಗಿದೆ.

ಇದಲ್ಲದೆ, ನೀರಿನ ಟ್ಯಾಂಕ್‌ನ ಒಳಭಾಗ ಹಾಗೂ ಸುತ್ತಮುತ್ತ ಪಾಚಿ ಕಟ್ಟಿಕೊಂಡಿದ್ದು, ನಿಯಮಿತವಾಗಿ ಸ್ವಚ್ಛಗೊಳಿಸದಿರುವುದು ಕಂಡುಬಂದಿದೆ. ಕುಡಿಯುವ ನೀರಿನ ಘಟಕವನ್ನು ಸ್ವಚ್ಛವಾಗಿಡಬೇಕಾದ ಸಂದರ್ಭದಲ್ಲಿ ಈ ರೀತಿಯ ನಿರ್ಲಕ್ಷ್ಯದಿಂದ ಸಾಂಕ್ರಾಮಿಕ ರೋಗಗಳ ಭೀತಿ ಸಾರ್ವಜನಿಕರಲ್ಲಿ ಮೂಡಿದೆ.

ಪಟ್ಟಣ ಪಂಚಾಯಿತಿಯಿಂದ ನೇಮಕಗೊಂಡಿರುವ ನೀರು ಬಿಡುವ ಸಿಬ್ಬಂದಿ ಘಟಕದ ಮೇಲ್ವಿಚಾರಣೆ ವಹಿಸುತ್ತಿದ್ದರೂ, ಟ್ಯಾಂಕ್ ಸ್ವಚ್ಛಗೊಳಿಸುವುದು, ಪಾಚಿ ತೆರವುಗೊಳಿಸುವುದು ಹಾಗೂ ಹಾಳಾಗಿರುವ ನಲ್ಲಿಗಳನ್ನು ದುರಸ್ತಿ ಮಾಡಿ ಹೊಸ ನಲ್ಲಿಗಳನ್ನು ಅಳವಡಿಸುವ ಕಾರ್ಯ ಕೈಗೊಂಡಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.

ಈ ಕುರಿತು ಸಾರ್ವಜನಿಕರು ಪ್ರಶ್ನಿಸಿದಾಗ, ‘ಎಷ್ಟು ಬಾರಿ ಸರಿಪಡಿಸಿದರೂ ಮತ್ತೆ ಅದೇ ರೀತಿ ಆಗುತ್ತದೆ’ ಎಂಬ ರೀತಿಯಲ್ಲಿ ಸಿಬ್ಬಂದಿ ಪ್ರತಿಕ್ರಿಯಿಸುತ್ತಿದ್ದಾರೆ ಎನ್ನಲಾಗಿದ್ದು, ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಕೂಡಲೇ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಿರ್ಲಕ್ಷ್ಯ ವಹಿಸಿರುವ ಸಿಬ್ಬಂದಿಯಿಂದ ಸ್ಪಷ್ಟನೆ ಪಡೆದು, ಟ್ಯಾಂಕ್‌ನಲ್ಲಿರುವ ಪಾಚಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸ್ವಚ್ಛಗೊಳಿಸುವುದರ ಜೊತೆಗೆ ಹಾಳಾಗಿರುವ ನಲ್ಲಿಗಳನ್ನು ಬದಲಾಯಿಸಬೇಕು. ನೀರು ಪೋಲಾಗದಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯದಲ್ಲಿ ನಿರ್ಲಕ್ಷ್ಯ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದ್ದು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!