ಮೂಡಿಗೆರೆ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಅಂದಿನ ಕಂದಾಯ ಮಂತ್ರಿಗಳು ರಾಜ್ಯದ ಎಲ್ಲಾ ಗ್ರಾಮಗಳನ್ನು 6 ತಿಂಗಳಲ್ಲಿ ಪೋಡಿ ಮುಕ್ತ ಗ್ರಾಮಗಳನ್ನಾಗಿ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಕಂದಾಯ ಮಂತ್ರಿಗಳು ಬದಲಾದರೂ ಪೋಡಿಮುಕ್ತ ಗ್ರಾಮಗಳ ಅಭಿಯಾನ ಪೂರ್ಣವಾಗಿಲ್ಲ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ್‌ಗೌಡ ದೂರಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಕಾರದ ಸುತ್ತೋಲೆಯಂತೆ ಪೋಡಿ ಕಾರ್ಯ ನಡೆಸುವಾಗ ಅಕ್ಕ ಪಕ್ಕದ ಜಮೀನಿನ ಮಾಲೀಕರು ಅಡ್ಡಿಪಡಿಸುವಂತಿಲ್ಲ. ಪಹಣಿ ವಿಸ್ತೀರ್ಣದ ಅನುಸಾರ ಪೋಡಿ ಮಾಡಿ, ನಕ್ಷೆ ತಯಾರಿಸಿ ರೈತರಿಗೆ ವಿತರಿಸತಬೇಕು. ಈ ಪ್ರಕ್ರಿಯೆಯಿಂದ ಅಸಮಧಾನಗೊಂಡ ರೈತರು ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಬಹುದು. ಆದರೆ ಅಧಿಕಾರಿಗಳು ತಕರಾರು ಕಾರಣ ನೀಡಿ ಸರ್ವೆ ನಡೆಸುವುದನ್ನು ಕೈ ಬಿಟ್ಟಿದ್ದಾರೆ. ಇದರಿಂದ ಸರಕಾರದ ಪೋಡಿ ಮುಕ್ತ ಗ್ರಾಮ ಕಾರ್ಯಕ್ರಮ ಸಂಪೂರ್ಣ ವಿಫಲ ಕಂಡಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ಡಿ.ಆರ್.ಪುಟ್ಟಸ್ವಾಮಿಗೌಡ ಮಾತನಾಡಿ, ಪೋಡಿ ಕಾರ್ಯಕ್ಕೆ ಸರ್ವೆ ಉಚಿತವಾಗಿ ಮಾಡಬೇಕಾಗಿದ್ದರೂ ಇದಕ್ಕೆ ಹಣ ಕಟ್ಟಿಸಿಕೊಂಡು ನಿಗಧಿತ ಅವಧಿಯಲ್ಲಿ ಸರ್ವೆ ಅಂತ್ಯಗೊಳಿಸದೇ, ಅರ್ಜಿ ಹಾಕಿರುವ ಅವದಿ ಮುಗಿದಿದೆ ಎಂದು ಮತ್ತೆ ಹಣ ಕಟ್ಟಿಸಿಕೊಂಡಿದ್ದಾರೆ. ೧೫ ದಿನದಲ್ಲಿ ಫೋಡಿಮುಕ್ತ ಅಭಿಯಾನದ ಉಸ್ತುವಾರಿ ಹೊಂದಿರುವ ತಹಶೀಲ್ದಾರ್ ಅವರು, ತಾಲೂಕಿನಲ್ಲಿ ಪೋಡಿಮುಕ್ತ ಗ್ರಾಮಗಳ ಪಟ್ಟಿ, ಸರಕಾರಕ್ಕೆ ಸಲ್ಲಿಸಿರುವ ವರದಿಯನ್ನು ಬಹಿರಂಗಪಡಿಸಬೇಕು. ತಾಲೂಕಿನಲ್ಲಿ ಪೋಡಿ ಮುಕ್ತ ಗ್ರಾಮ ಮಾಡಲು ಕ್ರಮ ವಹಿಸಬಬೇಕು. ಇಲ್ಲವಾದರೆ ತಾಲೂಕು ಕಚೇರಿ ಎದುರು ಅನಿರ್ಧಿಷ್ಟ ಕಾಲ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ವನಶ್ರೀ, ತಾಲೂಕು ಕಾರ್ಯದರ್ಶಿ ಎಂ.ಎನ್.ಚಂದ್ರೇಗೌಡ, ಮಂಜುನಾಥ್ ಹೊನ್ನೆಕೊಯ್ಲು , ಎಚ್.ಎಸ್.ನಾಗೇಶ್‌ಗೌಡ, ಚಂದ್ರೇಗೌಡ ಕುಂದೂರು, ಚಂದ್ರೇಗೌಡ ಕೆಲ್ಲೂರು, ಸುಬ್ರಾಯಗೌಡ ಮಡ್ಡಿಕೆರೆ, ನಿತಿನ್ ಅಬಚೂರು, ಲಿಂಗೇಗೌಡ ಮಡ್ಡಿಕೆರೆ, ಪ್ರಸಾದ್ ಮಗ್ಗಲಮಕ್ಕಿ, ಶಕುಂತಮ್ಮ ಬಣಕಲ್ ಉಪಸ್ಥಿತರಿದ್ದರು.
