ಹಾಸನ: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಹಾಸನ ಜಿಲ್ಲಾ ಪೊಲೀಸ್ ಇಲಾಖೆ ಸರ್ವಸನ್ನದ್ಧವಾಗಿದೆ. ಜಿಲ್ಲೆಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವರ್ಷಾಚರಣೆಯ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸಿದ್ದು ಜಿಲ್ಲೆಯ 50ಕ್ಕೂ ಹೆಚ್ಚು ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ತಪಾಸಣಾ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ. ಗಡಿ ಪ್ರದೇಶಗಳಲ್ಲಿಯೂ ಕಟ್ಟುನಿಟ್ಟಿನ ತಪಾಸಣೆ ನಡೆಯಲಿದೆ. ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತಿವೇಗದ ಚಾಲನೆ ಹಾಗೂ ವೀಲಿಂಗ್ ತಡೆಗಟ್ಟಲು ವಿಶೇಷ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ.
ಒಟ್ಟು 10 ವಿಶೇಷ ತಂಡಗಳು ಹಾಗೂ 300 ಹೋಂಗಾರ್ಡ್‌ಗಳನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತಿದೆ.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆಜಿಲ್ಲೆಯ 25 ಕಡೆಗಳಲ್ಲಿ ದೊಡ್ಡ ಮಟ್ಟದ ಜನಸಂದಣಿ ಸೇರುವ ಸಾಧ್ಯತೆಯಿದ್ದು, ಅಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ವಿಶೇಷ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಸೋಷಿಯಲ್ ಮೀಡಿಯಾಗಳ ಮೇಲೆ ನಿರಂತರ ನಿಗಾ ಇರಿಸಲಾಗಿದ್ದು, ಪ್ರಚೋದನಕಾರಿ ಸಂದೇಶ ಹರಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು.ನಿಯಮಗಳ ಉಲ್ಲಂಘನೆಗೆ ದಂಡದ ಬಿಸಿ ಬುಧವಾರ ಮಧ್ಯರಾತ್ರಿ 12 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿದೆ.
ಈಗಾಗಲೇ ಮಾಲೀಕರ ಸಭೆ ನಡೆಸಿ ಸೂಚನೆ ನೀಡಲಾಗಿದ್ದು, ಯಾವುದೇ ಪಾರ್ಟಿಗಳಿಗೆ ವಿಶೇಷ ಅನುಮತಿ ನೀಡಿಲ್ಲ. ಹೋಟೆಲ್ ಹಾಗೂ ಲಾಡ್ಜ್‌ಗಳಲ್ಲಿ ಆಚರಣೆ ಮಾಡುವವರು ಹೊರಗೆ ಬರುವಂತಿಲ್ಲ.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಪ್ರಕರಣ ದಾಖಲಿಸಲಾಗುವುದು. ಜನರು ಜವಾಬ್ದಾರಿಯುತವಾಗಿ ಹೊಸ ವರ್ಷವನ್ನು ಸ್ವಾಗತಿಸಬೇಕು. ಇತರರಿಗೆ ತೊಂದರೆಯಾಗದಂತೆ, ಕಾನೂನು ಪಾಲಿಸುವ ಮೂಲಕ ಸಂಭ್ರಮಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ತಿಳಿಸಿದ್ದಾರೆ.
