ಅಂಚೆ ಮತಗಳ ಮರು ಎಣಿಕೆಯಲ್ಲಿ ತಿರುಚಿದ ಆರೋಪ ಸಂಬಂಧ ಶೃಂಗೇರಿಯ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ಡಿ.ಎನ್. ಜೀವರಾಜ್ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐ ಆರ್ ಗೆ ನೀಡಲಾಗಿರುವ ಮಧ್ಯಂತರ ತಡೆಯಾಜ್ಞೆ ಆದೇಶವನ್ನು ಹೈಕೋರ್ಟ್ ಜೂನ್ 3ರ ವರೆಗೆ ವಿಸ್ತರಿಸಿದೆ.
ಮತ ತಿರುಚಿದ ಆರೋಪದಲ್ಲಿ ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿದ್ದ ಸುಧೀರ್ ಮುರೋಳ್ಳಿ ದೂರಿನ ಆಧಾರದಲ್ಲಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಜೀವರಾಜ್ ಹಾಗೂ ಚಿಕ್ಕಮಗಳೂರು ಹಿಂದಿನ ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ಸಲ್ಲಿಸಿರುವ ಅರ್ಜಿಗಳು ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ರಜಾ ಕಾಲದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಇದೇ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರದ ಚುನಾವಣಾಧಿಕಾರಿಯಾಗಿದ್ದ ಟಿ.ಆರ್. ವೇದಮೂರ್ತಿ ಅವರು ಎಫ್ಐಆರ್ ರದ್ದು ಕೋರಿರುವ ಅರ್ಜಿ ಮೊದಲ ಬಾರಿಗೆ ವಿಚಾರಣೆಗೆ ಬಂದಿತ್ತು.
ವಿಚಾರಣೆ ವೇಳೆ ಪ್ರಕರಣದ ಮೂಲ ದೂರುದಾರ ಸುಧೀರ್ ಮುರೋಳ್ಳಿಗೆ ಅವರ ಪರ ವಕೀಲರು, ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು. ಈ ಅಂಶವನ್ನು ಪರಿಗಣಿಸಿದ ಪೀಠ, ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿತು. ಅಲ್ಲಿಯವರೆಗೆ ಎಫ್ಐಆರ್ ಗೆ ತಡೆಯಾಜ್ಞೆ ನೀಡಿ ಮೇ 5ರಂದು ಹೊರಡಿಸಿದ್ದ ಮಧ್ಯಂತರ ತಡೆಯಾಜ್ಞೆ ಆದೇಶವನ್ನು ವಿಸ್ತರಿಸಿತು. ಈ ಆದೇಶವನ್ನು ವೇದಮೂರ್ತಿ ಅವರ ಅರ್ಜಿಗೂ ಅನ್ವಯಿಸಿತು. ಹಾಗೆಯೇ ಈ ಅರ್ಜಿ ಸಂಬಂಧ ಪ್ರತಿವಾದಿಗಳಾದ ರಾಜ್ಯ ಸರ್ಕಾರ (ಚಿಕ್ಕಮಗಳೂರು ಟೌನ್ ಠಾಣಾ ಪೊಲೀಸರು) ಮತ್ತು ದೂರುದಾರ ಸುಧೀರ್ ಮುರೋಳ್ಳಿ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
