ಕೊಪ್ಪ: ತಾಲೂಕಿನ ಮೇಗುಂದ ಹೋಬಳಿಯ ಅತ್ತಿಕೊಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನಗುಂಡಿ ಗ್ರಾಮದ ನೇಫಾ ಗ್ರಾಮದಲ್ಲಿ “ರಸ್ತೆ ದುರಸ್ತಿ ಮಾಡಿದರೆ ಮಾತ್ರ ಮತ. ಇಲ್ಲದಿದ್ದರೆ ನಮ್ಮೂರಿಗೆ ಯಾವ ರಾಜಕೀಯ ಪಕ್ಷಕ್ಕೂ ಪ್ರವೇಶವಿಲ್ಲ” ಎಂಬ ಬ್ಯಾನರ್ ಹಿಡಿದು ತಮ್ಮ ಗ್ರಾಮದ ಸಮಸ್ಯೆಗಳನ್ನು ವಿವರಿಸಿದರು.
ಕೊಪ್ಪ ತಾಲೂಕಿನ ಗಡಿಗ್ರಾಮವೂ ಆಗಿರುವ ನೇಫಾ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯೂ ಸುಮಾರು 25 ವರ್ಷಗಳಿಂದ ಪಾಳು ಬಿದ್ದಿದ್ದೆ ಇಡೀ ರಸ್ತೆಯೇ ಹೊಂಡಗುಂಡಿಗಳಿಂದ ಕೂಡಿದ್ದು ನಿತ್ಯ ವಾಹನ ಸವಾರರು ಹರಸಾಹಸ ಪಟ್ಟು ಓಡಾಡುವ ಪರಿಸ್ಥಿತಿಯಿದ್ದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಹೀಗಾಗಿ ಗ್ರಾಮಸ್ಥರೆಲ್ಲ ಮುಂಬರುವ ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಯನ್ನು ನಮ್ಮೂರ ರಸ್ತೆಗಾಗಿ ಬಹಿಷ್ಕರಿಸಲು ಮುಂದಾಗಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದೆವು.
ಈ ಹಿಂದೆ ವಿಧಾನಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದೆವು ಆಗ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಈ ರೀತಿ ಮಾಡುವುದು ಸರಿಯಲ್ಲ. ಚುನಾವಣೆ ದಿನಾಂಕ ನಿಗದಿಯಾಗಿದ್ದು ಚುನಾವಣೆ ನಂತರ ರಸ್ತೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿ ಹೋಗಿದ್ದರು. ನಾವು ಕೂಡ ಅಧಿಕಾರಿಗಳ ಮಾತು ಕೇಳಿ ಚುನಾವಣೆ ಬಹಿಷ್ಕಾರದಿಂದ ಹಿಂದೆ ಸರಿದಿದ್ದೆವು.
ಆದರೆ ನಮ್ಮೂರಿನ ರಸ್ತೆ ಮಾತ್ರ ಹಾಗೆ ಇದೆ. ನಮಗೆ ಮಾತು ಕೊಟ್ಟು ಹೋಗಿದ್ದ ಅಧಿಕಾರಿಗಳು ಈಗ ಇಲ್ಲಿ ಇಲ್ಲ.
ಹೀಗಾಗಿ ಈ ಭಾರೀ ಯಾರ ಮಾತನ್ನು ಕೇಳುವ ಪ್ರಶ್ನೆಯೇ ಇಲ್ಲ. ನಮ್ಮೂರ ರಸ್ತೆಯೇ ನಮಗೆ ಮುಖ್ಯ ಹೀಗಾಗಿ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ.
ವರದಿ: ಶಶಿ ಬೆತ್ತದಕೊಳಲು
