Tuesday, August 18, 2026
Homeಕರ್ನಾಟಕ'ಪರಿಸರ ಸೂಕ್ಷ್ಮ ಪ್ರದೇಶ' ಘೋಷಣೆಗೆ ಶಾಸಕಿ ಗಾಯತ್ರಿ ಶಾಂತೇಗೌಡ ಆಕ್ಷೇಪ: ಕಸ್ತೂರಿ ರಂಗನ್ ವರದಿ ಜಾರಿಗೆ...

‘ಪರಿಸರ ಸೂಕ್ಷ್ಮ ಪ್ರದೇಶ’ ಘೋಷಣೆಗೆ ಶಾಸಕಿ ಗಾಯತ್ರಿ ಶಾಂತೇಗೌಡ ಆಕ್ಷೇಪ: ಕಸ್ತೂರಿ ರಂಗನ್ ವರದಿ ಜಾರಿಗೆ ರಾಜ್ಯ ಸ್ಪಷ್ಟ ವಿರೋಧ

Telegram Group
Join Now

ಬೆಂಗಳೂರು: ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಮಲೆನಾಡು ಭಾಗಗಳ ನೂರಾರು ಜನವಸತಿ ಹಾಗೂ ಗ್ರಾಮೀಣ ಪ್ರದೇಶಗಳನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ (Eco-Sensitive Area) ಎಂದು ಘೋಷಿಸುತ್ತಿರುವುದಕ್ಕೆ ವಿಧಾನ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅರಣ್ಯ ಹಾಗೂ ಜೀವಿಪರಿಸ್ಥಿತಿ ಸಚಿವರು, ಕಸ್ತೂರಿ ರಂಗನ್ ವರದಿಯ ಶಿಫಾರಸುಗಳನ್ನು ನಿರಾಕರಿಸುವ ರಾಜ್ಯ ಸರ್ಕಾರದ ಸ್ಪಷ್ಟ ನಿಲುವನ್ನು ಕೇಂದ್ರಕ್ಕೆ ಈಗಾಗಲೇ ತಿಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಲೆನಾಡಿಗರ ಪರವಾಗಿ ಧ್ವನಿ ಎತ್ತಿದ ಶಾಸಕಿ ಗಾಯತ್ರಿ ಶಾಂತೇಗೌಡ

ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕಿ ಎ.ವಿ. ಗಾಯತ್ರಿ ಶಾಂತೇಗೌಡ, “ಚಿಕ್ಕಮಗಳೂರು ಜಿಲ್ಲೆಯ ಹಲವು ಜನವಸತಿ ಪ್ರದೇಶಗಳು ಸೇರಿದಂತೆ ಮಲೆನಾಡಿನ ನೂರಾರು ಗ್ರಾಮೀಣ ಭಾಗಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಿರುವುದು ರೈತರು ಮತ್ತು ಸಾರ್ವಜನಿಕರಿಗೆ ಬಿಸಿಲು ಕುದುರೆಯಂತಾಗಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ವೈಜ್ಞಾನಿಕವಲ್ಲದ ರೀತಿಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದು, ಇದರಿಂದ ಗ್ರಾಮೀಣ ಭಾಗದ ಬಡವರು, ಕೂಲಿ ಕಾರ್ಮಿಕರು ಹಾಗೂ ರೈತರ ಜೀವನಕ್ಕೆ ದಾರಿ ಕಾಣದಂತಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ಅಲ್ಲದೆ, “ಈಗಾಗಲೇ ಗ್ರಾಮೀಣ ಭಾಗದ ಜನರಿಗೆ ನಿವೇಶನ ನೀಡುವ ಬಗ್ಗೆ ಸರ್ಕಾರದಲ್ಲಿ ಚರ್ಚೆಯಾಗಿದ್ದು, ನಮೂನೆ 53, 52, 57 ರಡಿ ಹಕ್ಕುಪತ್ರಕ್ಕಾಗಿ ರೈತ ಕುಟುಂಬಗಳು ಕಾಯುತ್ತಿವೆ. ಜಂಟಿ ಸರ್ವೇ ಕಾರ್ಯವೂ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಏಕಾಏಕಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವುದು ಅವರ ಮೂಲಭೂತ ಸೌಕರ್ಯಗಳ ಕನಸಿಗೆ ಹೊಡೆತ ನೀಡಿದಂತಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಈ ಕುರಿತು ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಸೂಕ್ತ ಮನವರಿಕೆ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.

ಗಾಯತ್ರಿ ಶಾಂತೇಗೌಡ ಪ್ರಶ್ನೆಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅಭಯ

ಶಾಸಕರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ, ಈ ವಿಷಯದಲ್ಲಿ ರಾಜ್ಯ ಸರ್ಕಾರದ ಸ್ಪಷ್ಟ ನಿಲುವನ್ನು ಸದನಕ್ಕೆ ವಿವರಿಸಿದ್ದಾರೆ.

7ನೇ ಕರಡು ಅಧಿಸೂಚನೆ: ಡಾ|| ಕೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡವು 2013 ರಲ್ಲಿ ನೀಡಿದ ವರದಿಯನ್ನಾಧರಿಸಿ ಕೇಂದ್ರ ಸರ್ಕಾರವು ಜುಲೈ 27, 2026 ರಂದು 7ನೇ ಬಾರಿಗೆ ಮರು ಕರಡು ಅಧಿಸೂಚನೆಯನ್ನು ಹೊರಡಿಸಿದೆ.

ಕರ್ನಾಟಕದ ವ್ಯಾಪ್ತಿ: ಈ ಕರಡು ಅಧಿಸೂಚನೆಯಲ್ಲಿ ಕರ್ನಾಟಕದ 10 ಜಿಲ್ಲೆಗಳ (ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ, ಬೆಳಗಾವಿ, ಚಾಮರಾಜನಗರ, ಉಡುಪಿ) ಒಟ್ಟು 39 ತಾಲೂಕುಗಳ 1,449 ಗ್ರಾಮಗಳನ್ನು ಹಾಗೂ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರಿಸಲಾಗಿದೆ.

ದೈನಂದಿನ ಜೀವನಕ್ಕೆ ತೊಂದರೆಯಿಲ್ಲ: ಕರಡು ಅಧಿಸೂಚನೆಯಲ್ಲಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಹಾಗೂ ಬೃಹತ್ ಟೌನ್‌ಶಿಪ್ ನಿರ್ಮಾಣದಂತಹ ಚಟುವಟಿಕೆಗಳನ್ನು ಮಾತ್ರ ನಿಯಂತ್ರಿಸಲಾಗಿದೆ. ನೆಡುತೋಪು ನಿರ್ಮಾಣ, ಕೃಷಿ ಚಟುವಟಿಕೆ ಅಥವಾ ಸಾರ್ವಜನಿಕರ ದೈನಂದಿನ ಜೀವನೋಪಾಯದ ಮೇಲೆ ಯಾವುದೇ ನಿಷೇಧ ಹೇರಿಲ್ಲ ಮತ್ತು ಜನರನ್ನು ಒಕ್ಕಲೆಬ್ಬಿಸುವ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ವರದಿ ತಿರಸ್ಕಾರಕ್ಕೆ ರಾಜ್ಯ ಸಂಪುಟ ತೀರ್ಮಾನ: ಕಸ್ತೂರಿ ರಂಗನ್ ವರದಿಯಲ್ಲಿ ಗುರುತಿಸಲಾದ ಪ್ರದೇಶಗಳು ಈಗಾಗಲೇ ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿದ್ದು, ಹೆಚ್ಚುವರಿ ನಿಬಂಧನೆಗಳನ್ನು ವಿಧಿಸುವುದರಿಂದ ಜನರ ಜೀವನೋಪಾಯಕ್ಕೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಈ ವರದಿಯ ಶಿಫಾರಸುಗಳು ಹಾಗೂ ಕೇಂದ್ರದ ಕರಡು ಅಧಿಸೂಚನೆಗಳನ್ನು ಸಂಪೂರ್ಣವಾಗಿ ನಿರಾಕರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ರಾಜ್ಯ ಸರ್ಕಾರದ ಈ ಸ್ಪಷ್ಟ ತಿರಸ್ಕೃತ ನಿಲುವನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಜುಲೈ 27, 2026 ರಂದು ಕೇಂದ್ರ ಹೊರಡಿಸಿರುವ 7ನೇ ಹೊಸ ಕರಡು ಅಧಿಸೂಚನೆಯನ್ನು ಸರ್ಕಾರಿ ಹಂತದಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments