ಎನ್.ಆರ್. ಪುರ: ಕಳ್ಳತನ ಪ್ರಕರಣವೊಂದರಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ದೋಚಿದ್ದ 1.20 ಲಕ್ಷ ರೂ ನಗದು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಸೇರಿದಂತೆ ಒಟ್ಟು 3.20 ಲಕ್ಷ ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ಎನ್.ಆರ್.ಪುರ ಪಟ್ಟಣದ ಹಳೇಪೇಟೆಯಲ್ಲಿ ನರಸಿಂಹರಾಜಪುರ-ಶಿವಮೊಗ್ಗಕ್ಕೆ ಹೋಗುವ ರಸ್ತೆಯಲ್ಲಿ ರಬ್ಬರ್ ವ್ಯಾಪಾರ ಮಾಡುತ್ತಿದ್ದು ಟಿನು ಥೋಮಸ್ ನವೆಂಬರ್16 ರಂದು ಬೆಳಿಗ್ಗೆ ಅಂಗಡಿಯಲ್ಲಿ ವ್ಯಾಪಾರ ಮುಗಿಸಿ ಊಟಕ್ಕೆ ತೆರಳಿದ್ದರು. ಮಧ್ಯಾಹ್ನ 1 ಗಂಟೆಗೆ ಯಾರೋ ಕಳ್ಳರು ಅಂಗಡಿಯ ಕ್ಯಾಶ್ ಟೇಬಲ್ ನ ಡ್ರಾ ಲಾಕ್ ನ್ನು ಒಡೆದು ಕ್ಯಾಶ್ ಡ್ರಾನಲ್ಲಿದ್ದ ನಗದು 2.50 ರೂ.ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಈ ಕಳವು ಪ್ರಕರಣದಲ್ಲಿ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಕಳವುಮಾಡಿರುವ ಹಣವನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಡಾ. ವಿಕ್ರಂ ಅಮಟೆ, ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಸಿ.ಟಿ.ಜಯಕುಮಾರ್ ಕೊಪ್ಪವಿಭಾಗದ ಡಿವೈಎಸ್‌ಪಿ ಬಾಲಾಜಿಸಿಂಗ್ ಮಾರ್ಗದರ್ಶನದಲ್ಲಿ ಎನ್.ಆರ್.ಪುರ ವೃತ್ತ ನಿರೀಕ್ಷಕ ಗುರುದತ್ ಕಾಮತ್ ನೇತೃತ್ವದಲ್ಲಿ ಎನ್.ಆರ್.ಪುರ ಪೊಲೀಸ್ ಠಾಣಾಧಿಕಾರಿ ಬಿ.ಎಸ್. ನಿರಂಜನ್‌ಗೌಡ, ಅಪರಾಧ ವಿಭಾಗದ ಠಾಣಾಧಿಕಾರಿ ಎನ್.ಎ. ಜ್ಯೋತಿ ಹಾಗೂ ಸಿಬ್ಬಂದಿಗಳಾದ ಮಧು ಎಸ್ ಜಿ ಯುಗಾಂಧರ, ಪರಮೇಶ್, ಬಿನು ಪಿಎ, ಅಮಿತ್‌ಚೌಗುಲೆ, ದೇವರಾಜ, ರೇವಗೊಂಡ ಬಿರಾದರ, ಕೌಶಿಕ್, ಸ್ವರೂಪ್ ಇವರುಗಳನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ನಯಾಜ್‌ಅಂಜುಂ ಹಾಗೂ ರಬ್ಬಾನಿ ಇವರ ತಾಂತ್ರಿಕ ಸಹಯೋಗದೊಂದಿಗೆ ವಿವಿಧ ಆಯಾಮಗಳಲ್ಲಿ ವೈಜ್ಞಾನಿಕವಾಗಿ ಮಾಹಿತಿಯನ್ನು ಸಂಗ್ರಹಿಸಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಬಾಗಿಯಾಗಿದ್ದ ಹಣ್ಣಿನ ವ್ಯಾಪಾರಿ ಮೂಡಿಗೆರೆ ಛತ್ರಮೈದಾನದ ಮೊಹಮ್ಮದ್ ಶಹಬಾದ್, ಪೇಯಿಟಿಂಗ್ ಕೆಲಸದ ಜೆಮ್‌ಶಿದ್ ಅವರುಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕಳವು ಮಾಡಿದ್ದ ನಗದು ಮತ್ತು ಬೈಕನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯಾಚರಣೆಯನ್ನು ಜಿಲ್ಲಾಪೊಲೀಸ್ ಮುಖ್ಯಾಧಿಕಾರಿಗಳು ಶ್ಲಾಘಿಸಿದ್ದಾರೆ.
