ಹೊರನಾಡು: ನಾಳೆ ಚಂದ್ರಗ್ರಹಣ ದಿನದಂದು ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ನಡೆಸುವುದಾಗಿ ದೇವಸ್ಥಾನದ ಆಡಳಿತ ಮಂಡಳಿಯು ತಿಳಿಸಿದೆ. ಅಂದು ಗ್ರಹಣ ಆರಂಭ ಹಾಗೂ ಗ್ರಹಣ ಮೋಕ್ಷ ಕಾಲದವರೆಗೆ ಶ್ರೀ ಅನ್ನಪೂರ್ಣೇಶ್ವರಿಗೆ ಅಭಿಷೇಕ ನಡೆಸಲಾಗುತ್ತದೆ. ಹಾಗಾಗಿ, ಆ ಅಭಿಷೇಕವನ್ನು ನೋಡಲು ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ನಾಳೆ ಸೆಪ್ಟೆಂಬರ್ 7-8ರ ನಡುವೆ ಚಂದ್ರಗ್ರಹಣ ಸಂಭವಿಸುತ್ತದೆ. ಈ ಚಂದ್ರಗ್ರಹಣ ಭಾರತದಲ್ಲಿಯೂ ಗೋಚರಿಸುವುದರಿಂದ ಇದು ಧಾರ್ಮಿಕವಾಗಿ ವಿಶೇಷವಾದ ಮಹತ್ವವನ್ನು ಪಡೆದುಕೊಂಡಿದೆ. ಸೆ. 7ರ ರಾತ್ರಿ ಸುಮಾರು ರಾತ್ರಿ 9.57ರಿಂದ ಮಧ್ಯರಾತ್ರಿ 1.26ರವರೆಗೆ ಗ್ರಹಣ ಇರುತ್ತದೆ. ಸಂಪೂರ್ಣ ಗ್ರಹಣ ಮೋಕ್ಷವು ಮಧ್ಯರಾತ್ರಿ 2.25ಕ್ಕೆ ಇರಲಿದೆ ಎಂದು ತಿಳಿಸಿದ್ದಾರೆ.
ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲೇನು ವಿಶೇಷ?
ಮಾಧ್ಯಮಗಳ ಜೊತೆ ಮಾತನಾಡಿದ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ನಾಳೆ ದೇವಸ್ಥಾನದಲ್ಲಿ ರಾತ್ರಿ ಪ್ರಸಾದ ವಿನಿಮಯ ಅಥವಾ ಅನ್ನಸಂತರ್ಪಣೆ ಇರುವುದಿಲ್ಲ ಎಂದು ಹೇಳಿದ್ದಾರೆ. ಸಾಮಾನ್ಯವಾದಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಹಾಗೂ ರಾತ್ರಿಯ ವೇಳೆ ಅನ್ನಸಂತರ್ಪಣೆ ಸೇವೆಯನ್ನು ನೀಡಲಾಗುತ್ತದೆ. ಚಂದ್ರಗ್ರಹಣದ ದಿನ ಬೆಳಗ್ಗೆ ಹಾಗೂ ಮಧ್ಯಾಹ್ನದ ಅನ್ನಸಂತರ್ಪಣೆ ಸೇವೆಗಳು ಎಂದಿನಂತೆ ನಡೆಯುತ್ತವೆ. ಮಧ್ಯಾಹ್ನ 3 ಗಂಟೆಯ ನಂತರ ಈ ಸೇವೆಯನ್ನು ನಿಲ್ಲಿಸಲಾಗುತ್ತದೆ. ರಾತ್ರಿಯ ವೇಳೆ ದೇವಸ್ಥಾನದಲ್ಲಿ ಪ್ರಸಾದ ವಿನಿಯೋಗ ಇರುವುದಿಲ್ಲ ಎಂದು ಹೇಳಿದ್ದಾರೆ
ಮೂರು ಗಂಟೆಯ ನಂತರ ದೇವಸ್ಥಾನದಲ್ಲಿ ಚಂದ್ರದರ್ಶನಕ್ಕಾಗಿ ಅನ್ನಪೂರ್ಣೇಶ್ವರಿ ದೇವಿಗೆ ಅಭಿಷೇಕ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದಕ್ಕಾಗಿ ಸಿದ್ಧತೆಗಳು ಆರಂಭವಾಗಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ತಿಳಿಸಿದ್ದಾರೆ. ರಾತ್ರಿಯ ವೇಳೆ ಗ್ರಹಣ ಶುರುವಾಗುವ ಕಾಲದಿಂದ ಅಂದರೆ ರಾತ್ರಿ 9.57ರಿಂದ ಮಧ್ಯರಾತ್ರಿ 1.26ರವರೆಗೆ (ಗ್ರಹಣ ಮೋಕ್ಷದವರೆಗೆ) ಅನ್ನಪೂರ್ಣೇಶ್ವರಿಗೆ ಅಭಿಷೇಕಗಳನ್ನು ನೆರವೇರಿಸಲಾಗುತ್ತದೆ. ಆ ಸೇವೆಗಳನ್ನು ನೋಡಲು ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
