ತರೀಕೆರೆ: ಟ್ಯಾಂಕರ್ ಚಕ್ರಕ್ಕೆ ಒಂದು ವರ್ಷದ ಮಗು ಸಿಲುಕಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಗಾಳಿಹಳ್ಳಿ ಕ್ರಾಸ್ ಸಮೀಪದ ಆಂಜನೇಯ ಸ್ವಾಮಿ ದೇಗುಲ ಬೀದಿಯಲ್ಲಿ ನಡೆದಿದೆ.
ಗಾಳಿಹಳ್ಳಿ ಕ್ರಾಸ್ ನಿವಾಸಿ ವೆಂಕಟೇಶ್ ಎಂಬುವರ ಪುತ್ರ ಒಂದು ವರ್ಷದ ಮೌನೇಶ್ ಮೃತ ದುರ್ದೈವಿಯಾಗಿದೆ.
ಬುಧವಾರ ಬೆಳಗ್ಗೆ 7ಕ್ಕೆ ಪಟ್ಟಣದ ಗಾಳಿಹಳ್ಳಿ ಕ್ರಾಸ್ ಸಮೀಪದ ಆಂಜನೇಯ ಸ್ವಾಮಿ ದೇಗುಲ ಬೀದಿಗೆ ಕುಡಿಯುವ ನೀರು ಸರಬರಾಜು ಮಾಡಲು ಮಿನಿ ಟ್ಯಾಂಕರ್ ಬಂದಿತ್ತು. ಈ ವೇಳೆ ವೆಂಕಟೇಶ್ ಪತ್ನಿ ಚಂದನಾ ಕ್ಯಾನ್ ನಲ್ಲಿ ನೀರು ತುಂಬಿಸಿಕೊಳ್ಳಲು ಬಂದಾಗ ತಾಯಿಯನ್ನು ಹಿಂಬಾಲಿಸಿದ ಮಗು ಮಿನಿ ಟ್ಯಾಂಕರ್ನ ಮುಂದಿನ ಚಕ್ರದಡಿ ಸಿಲುಕಿ ತೀವ್ರವಾಗಿ ಗಾಯಗೊಂಡಿತ್ತು.
ಚಿಂತಾಜನಕ ಸ್ಥಿತಿಯಲ್ಲಿದ್ದ ಮಗುವನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಲಾಯಿತಾದರೂ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು.
