Sunday, August 9, 2026
Homeಜಿಲ್ಲಾಸುದ್ದಿತರುವೆ ಗ್ರಾ.ಪಂ. ನಿವೇಶನ ರಹಿತರಿಗೆ ಶೀಘ್ರದಲ್ಲೇ ಜಾಗ ಮಂಜೂರಿಗೆ ಕ್ರಮ : ಸಿಂಚನ ಗೌಡ ಭರವಸೆ

ತರುವೆ ಗ್ರಾ.ಪಂ. ನಿವೇಶನ ರಹಿತರಿಗೆ ಶೀಘ್ರದಲ್ಲೇ ಜಾಗ ಮಂಜೂರಿಗೆ ಕ್ರಮ : ಸಿಂಚನ ಗೌಡ ಭರವಸೆ

Telegram Group
Join Now

ಮೂಡಿಗೆರೆ : ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 60ಕ್ಕೂ ಹೆಚ್ಚು ನಿವೇಶನ ರಹಿತರು ಇಂದು ತರುವೆ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ತಮಗೆ ಶೀಘ್ರವಾಗಿ ಜಾಗ ಮಂಜೂರು ಮಾಡಿ ನಿವೇಶನ ಹಂಚಿಕೆ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ, ಆದರೆ ಭರವಸೆ ಮಾತ್ರ ಸಿಕ್ಕಿದ್ದು, ಕಾರ್ಯರೂಪಕ್ಕೆ ಬಂದಿಲ್ಲ ಎಂದು ದೂರಿದರು.

ನಿವೇಶನ ರಹಿತೆ ಪೂರ್ಣಿಮಾ ಮಾತನಾಡಿ, “ನಾವು ಹಲವು ವರ್ಷಗಳಿಂದ ನಮ್ಮ ಸಮಸ್ಯೆಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಶಾಸಕರಾದ ನಯನ ಮೋಟಮ್ಮ, ಚಿಕ್ಕಮಗಳೂರು ಜಿಲ್ಲಾಧಿಕಾರಿ,ಅರಣ್ಯ ಅಧಿಕಾರಿಗಳಾದ ಡಿಎಫ್‌ಒ, ಮೂಡಿಗೆರೆ ವಲಯ ಅರಣ್ಯಾಧಿಕಾರಿ, ತಹಸೀಲ್ದಾರ್ ಹಾಗೂ ಇಒ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಎಲ್ಲರೂ ಭರವಸೆ ನೀಡಿದ್ದಾರೆ. ಈ ಬಾರಿಯಾದರೂ ಜಾಗ ಸಮೇತ ನಿವೇಶನ ನೀಡಬೇಕು,” ಎಂದು ವಿನಂತಿಸಿದರು.

ಇನ್ನೊಬ್ಬ ನಿವೇಶನ ರಹಿತ ಕಿರಣ್ ಮಾತನಾಡಿ, “ನಾವು ಬಡ ಕುಟುಂಬಗಳು. ವರ್ಷಗಳಿಂದ ನಿರೀಕ್ಷೆಯಲ್ಲಿದ್ದೇವೆ. ಈ ಬಾರಿ ಅಧಿಕಾರಿಗಳು ಸ್ಪಷ್ಟ ನಿರ್ಧಾರ ತೆಗೆದುಕೊಂಡು ನಮಗೆ ನ್ಯಾಯ ಒದಗಿಸಬೇಕು,” ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ಮಾತನಾಡಿ, “ನಿವೇಶನ ರಹಿತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾಧ್ಯವಾದಷ್ಟು ಬೇಗ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ,” ಎಂದು ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿಂಚನ ಮಾತನಾಡಿ, “ಪ್ರಸ್ತುತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೆವಿನ್ಯೂ ಜಾಗದ ಕೊರತೆ ಇದೆ. ಹಳೆಯ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಲಭ್ಯವಿರುವ ಜಾಗವನ್ನು ಗುರುತಿಸಿದ ನಂತರ ನಿವೇಶನ ಮಂಜೂರು ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುವುದು,” ಎಂದು ಹೇಳಿದರು.
ನಿವೇಶನ ರಹಿತರು ಶೀಘ್ರದಲ್ಲೇ ಸ್ಪಷ್ಟ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವ ನಿರೀಕ್ಷೆಯಲ್ಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments