ಸೂರ್ಯೋದಯಕ್ಕೆ ಎರಡು ಗಂಟೆ ಮೊದಲು ಅಥವಾ ನಂತರದ ಸಮಯವನ್ನು ಯೋಗಕ್ಕೆ ಅತ್ಯಂತ ಪ್ರಶಸ್ತ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ‘ಸಾತ್ವಿಕ ಶಕ್ತಿ’ ಹೆಚ್ಚಾಗಿರುವುದರಿಂದ ಮನಸ್ಸು ಮತ್ತು ಆತ್ಮ ಪ್ರಕೃತಿಯೊಂದಿಗೆ ಸುಲಭವಾಗಿ ಒಂದಾಗುತ್ತವೆ. ಈ ಕೆಳಕಂಡ ಸುಲಭ ಆಸನಗಳನ್ನು ಮಾಡುವುದರಿಂದ ದಿನವಿಡೀ ಲವಲವಿಕೆಯಿಂದ ಇರಬಹುದು
ಮುಂಜಾನೆ ಮಾಡಬಹುದಾದ ಸುಲಭ ಯೋಗಾಸನಗಳು
- ವಾರ್ಮ್ ಅಪ್ (Warm-up): ಯಾವುದೇ ಆಸನ ಮಾಡುವ ಮೊದಲು ಕುತ್ತಿಗೆ, ಭುಜ, ಮಣಿಕಟ್ಟು ಮತ್ತು ಮೊಣಕಾಲುಗಳನ್ನು ಪ್ರದಕ್ಷಿಣಾಕಾರವಾಗಿ ನಿಧಾನವಾಗಿ ತಿರುಗಿಸಿ ಸ್ನಾಯುಗಳನ್ನು ಸಡಿಲಗೊಳಿಸಿ.
- ತಾಡಾಸನ (Mountain Pose): ನೆಟ್ಟಗೆ ನಿಂತು, ಕೈಗಳನ್ನು ಮೇಲೆತ್ತಿ ಬೆರಳುಗಳನ್ನು ಜೋಡಿಸಿ, ಅಂಗೈ ಆಕಾಶದ ಕಡೆಗಿರಲಿ. ಈಗ ನಿಧಾನವಾಗಿ ಹಿಮ್ಮಡಿಯನ್ನು ಮೇಲೆತ್ತಿ ಕಾಲ್ಬೆರಳುಗಳ ಮೇಲೆ ನಿಲ್ಲಿ. ಇದು ಇಡೀ ದೇಹಕ್ಕೆ ಸ್ಟ್ರೆಚ್ ನೀಡುತ್ತದೆ.
- ವೃಕ್ಷಾಸನ (Tree Pose): ಒಂದು ಕಾಲಿನ ಮೇಲೆ ಸಮತೋಲನ ಕಾಯ್ದುಕೊಂಡು, ಮತ್ತೊಂದು ಕಾಲಿನ ಪಾದವನ್ನು ಇನ್ನೊಂದು ಕಾಲಿನ ತೊಡೆಯ ಮೇಲಿಡಿ. ಕೈಗಳನ್ನು ನಮಸ್ಕಾರ ಮುದ್ರೆಯಲ್ಲಿ ಎದೆಯ ಬಳಿ ಅಥವಾ ತಲೆಯ ಮೇಲೆ ಹಿಡಿಯಿರಿ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
- ಮಾರ್ಜಾರಾಸನ (Cat Pose): ಮಂಡಿಯೂರಿ ಕುಳಿತು, ಕೈಗಳನ್ನು ನೆಲದ ಮೇಲಿಟ್ಟು ಮೇಜಿನ ಆಕೃತಿಯಲ್ಲಿ ಬನ್ನಿ. ಉಸಿರು ತೆಗೆದುಕೊಳ್ಳುತ್ತಾ ತಲೆ ಮೇಲೆತ್ತಿ ಬೆನ್ನನ್ನು ಕೆಳಕ್ಕೆ ಬಾಗಿಸಿ, ಉಸಿರು ಬಿಡುತ್ತಾ ಗಲ್ಲವನ್ನು ಎದೆಗೆ ಹಚ್ಚಿ ಬೆನ್ನನ್ನು ಮೇಲೆಕ್ಕೆ ಕಮಾನಿನಂತೆ ಮಾಡಿ. ಇದು ಬೆನ್ನುಮೂಳೆಗೆ ತುಂಬಾ ಒಳ್ಳೆಯದು.
- ಉಷ್ಟ್ರಾಸನ (Camel Pose): ಮಂಡಿಯೂರಿ ಕುಳಿತು ನಿಧಾನವಾಗಿ ಹಿಂದೆ ಬಾಗಿ ಎರಡೂ ಕೈಗಳಿಂದ ಹಿಮ್ಮಡಿಯನ್ನು ಹಿಡಿಯಿರಿ. ಇದು ಎದೆಯ ಭಾಗವನ್ನು ವಿಸ್ತರಿಸಲು ಮತ್ತು ಉಸಿರಾಟದ ಸಾಮರ್ಥ್ಯ ಹೆಚ್ಚಿಸಲು ಸಹಕಾರಿ.
- ಶಶಂಕಾಸನ (Rabbit Pose): ವಜ್ರಾಸನದಲ್ಲಿ ಕುಳಿತು ನಿಧಾನವಾಗಿ ಮುಂದೆ ಬಾಗಿ ಹಣೆ ನೆಲಕ್ಕೆ ತಾಗಿಸಿ. ಕೈಗಳನ್ನು ಮುಂದೆ ಚಾಚಿ. ಇದು ಮನಸ್ಸನ್ನು ಶಾಂತಗೊಳಿಸಲು ಅತ್ಯುತ್ತಮ ಆಸನ.
- ಸುಖಾಸನ ಮತ್ತು ಪ್ರಾಣಾಯಾಮ: ಆರಾಮವಾಗಿ ಸುಖಾಸನದಲ್ಲಿ ಕುಳಿತು ಕಣ್ಣು ಮುಚ್ಚಿ ಉಸಿರಾಟದ ಮೇಲೆ ಗಮನ ಹರಿಸಿ. ಅನುಲೋಮ-ವಿಲೋಮ ಅಥವಾ ಭ್ರಾಮರಿ ಪ್ರಾಣಾಯಾಮವನ್ನು ಅಭ್ಯಾಸ ಮಾಡಿ.
- ಓಂಕಾರ ಪಠಣ: ಯೋಗಾಭ್ಯಾಸದ ಕೊನೆಯಲ್ಲಿ 11 ಅಥವಾ 21 ಬಾರಿ ‘ಓಂ’ ಜಪ ಮಾಡುವುದರಿಂದ ಮನಸ್ಸು ಪ್ರಶಾಂತವಾಗುತ್ತದೆ ಮತ್ತು ಯೋಗದ ಸಂಪೂರ್ಣ ಲಾಭ ದೇಹಕ್ಕೆ ಸಿಗುತ್ತದೆ.
ಬೆಳಗಿನ ಯೋಗದಿಂದ ಆಗುವ 5 ಪ್ರಮುಖ ಲಾಭಗಳು
ಧನಾತ್ಮಕ ಆರಂಭ: ಬೆಳಗಿನ ಯೋಗ ಮತ್ತು ಧ್ಯಾನವು ಮೆದುಳನ್ನು ಉತ್ತೇಜಿಸಿ ಹೊಸ ಆಲೋಚನೆಗಳಿಗೆ ನಾಂದಿ ಹಾಡುತ್ತದೆ.
ಸಮಯ ನಿರ್ವಹಣೆ: ಬೆಳಗ್ಗೆಯೇ ವ್ಯಾಯಾಮ ಮುಗಿಸುವುದರಿಂದ ದಿನದ ಉಳಿದ ಕೆಲಸಗಳಿಗೆ ಹೆಚ್ಚಿನ ಸಮಯ ಸಿಗುತ್ತದೆ ಹಾಗೂ ಕೆಲಸದ ನಡುವೆ ಉಂಟಾಗುವ ಬೆನ್ನು ಅಥವಾ ಮೈಕೈ ನೋವು ದೂರವಾಗುತ್ತದೆ.
ಪ್ರಾಣಶಕ್ತಿಯ ಹೆಚ್ಚಳ: ಪ್ರಾಣಾಯಾಮ ಮಾಡುವುದರಿಂದ ದೇಹದಲ್ಲಿ ಆಮ್ಲಜನಕದ ಸಂಚಾರ ಸುಧಾರಿಸಿ, ಜೀವಶಕ್ತಿ ಅಥವಾ ‘ಪ್ರಾಣ’ ಹೆಚ್ಚಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ.
ಹಾರ್ಮೋನುಗಳ ಸಮತೋಲನ: ಯೋಗವು ದೇಹದ ಎಂಡೋಕ್ರೈನ್ ವ್ಯವಸ್ಥೆಯನ್ನು ಉತ್ತೇಜಿಸಿ ಹಾರ್ಮೋನುಗಳನ್ನು ಸಮತೋಲನದಲ್ಲಿಡುತ್ತದೆ. ಇದು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯನ್ನು (Metabolism) ಉತ್ತೇಜಿಸುತ್ತದೆ.
ದೇಹದ ಫ್ಲೆಕ್ಸಿಬಲಿಟಿ ಹೆಚ್ಚಿಸುತ್ತದೆ: ರಾತ್ರಿ ಮಲಗಿ ಎದ್ದಾಗ ದೇಹವು ಸ್ವಲ್ಪ ಬಿಗಿಯಾಗಿರುತ್ತದೆ (Stiff). ಬೆಳಗಿನ ಆಸನಗಳು ಸ್ನಾಯುಗಳನ್ನು ಸಡಿಲಗೊಳಿಸಿ ದೇಹದ ಫ್ಲೆಕ್ಸಿಬಲಿಟಿಯನ್ನು ಹೆಚ್ಚಿಸುತ್ತವೆ.
