ಇಂದೋರ್: ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಯ ಇಂದೋರ್‌ನಲ್ಲಿ ಕಲುಷಿತ ಕುಡಿಯುವ ನೀರಿನಿಂದ (contaminated drinking water) ಉಂಟಾದ ಅತಿಸಾರ ಮತ್ತು ವಾಂತಿ ಭೀಕರ ಸ್ವರೂಪ ಪಡೆದುಕೊಂಡಿದೆ. ಈ ಮಾರಕ ಸೋಂಕಿಗೆ ಈಗಾಗಲೇ 14 ಜನರು ಬಲಿಯಾಗಿದ್ದು, 1,400ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ದುರಂತಕ್ಕೆ ಕಾರಣವೇನು? (Cause of the Tragedy)
ಭಾಗೀರಥಪುರ ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಸೋರಿಕೆಯಾಗಿದ್ದು (pipeline leakage), ಅದರ ಮೇಲೆಯೇ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಇದರಿಂದಾಗಿ ಮಲಮೂತ್ರದ ತ್ಯಾಜ್ಯವು ಕುಡಿಯುವ ನೀರಿನೊಂದಿಗೆ ಬೆರೆತು ವಿಷಪೂರಿತ ನೀರು ಸರಬರಾಜಾಗಿತ್ತು. ಇದು ವೈದ್ಯಕೀಯ ಕಾಲೇಜಿನ ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಸದ್ಯ 201 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 32 ಮಂದಿ ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಡಿಯುವ ನೀರಿನಲ್ಲಿ ಮಲಮೂತ್ರ ಮಿಶ್ರಿತ ನೀರು ಸರಬರಾಜಾಗುತ್ತಿದ್ದರೂ ನಿದ್ದೆಯಲ್ಲಿದ್ದ ಇಂದೋರ್ ನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ. ಈ ನರಮೇಧದ ವಿರುದ್ಧ ಸಿಡಿದೆದ್ದಿರುವ ಯೂತ್ ಕಾಂಗ್ರೆಸ್ (Youth Congress) ಕಾರ್ಯಕರ್ತರು ಸಚಿವ ಕೈಲಾಶ್ ವಿಜಯವರ್ಗೀಯ (Kailash Vijayvargiya) ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಶಿಸ್ತು ಕ್ರಮಕ್ಕೆ ಅದೇಶಿಸಿದ ಸಿಎಂ
ಇಂದೋರ್ ಜಲದುರಂತದ ಭೀಕರತೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ (MP CM Mohan Yadav), ಅಧಿಕಾರಿಗಳ ಘೋರ ನಿರ್ಲಕ್ಷ್ಯದ ವಿರುದ್ಧ ಕಠಿಣ ಆದೇಶ ಹೊರಡಿಸಿದ್ದಾರೆ. ಇಂದೋರ್ ನಗರ ಪಾಲಿಕೆಯ (Indore Municipal Corporation) ಉನ್ನತ ಅಧಿಕಾರಿಗಳ ಬೇಜವಾಬ್ದಾರಿತನವೇ ಈ ದುರಂತಕ್ಕೆ ನೇರ ಕಾರಣ ಎಂದು ಕಿಡಿಕಾರಿರುವ ಅವರು, ತಪ್ಪಿತಸ್ಥರ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಪೈಪ್‌ಲೈನ್ ಸೋರಿಕೆಯನ್ನು ನಿರ್ಲಕ್ಷಿಸಿದ ಅಧಿಕಾರಿಗಳನ್ನು ಪತ್ತೆಹಚ್ಚಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವ ಸಿಎಂ, ಕೂಡಲೇ ಸಮಗ್ರ ವರದಿ ಸಲ್ಲಿಸುವಂತೆ ತಾಕೀತು ಮಾಡಿದ್ದಾರೆ. ಜೊತೆಗೆ ಸಂತ್ರಸ್ತ ಕುಟುಂಬಗಳಿಗೆ ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಂಡಿರುವ ಅವರು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯಾದ್ಯಂತ ಕಟ್ಟುನಿಟ್ಟಾದ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (Standard Operating Procedure – SOP) ಜಾರಿಗೆ ತರಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
