ಯಡಿಯೂರಪ್ಪ ಸಿಎಂ ಆಗಿದ್ದಾಗ ಕಾಲು ಎಳೆಯುವ ಜನರಿದ್ದರು, ಇದೀಗ ವಿಜಯೇಂದ್ರ ಅವರಿಗೂ ಅದೇ ಪರಿಸ್ಥಿತಿ ಇದೆ. ಇವರನ್ನೂ ಕಡೆಗಣಿಸಿದರೆ ಪಕ್ಷಕ್ಕೆ ನಷ್ಟವಾಗುತ್ತದೆ” ಎಂದು ರಂಭಾಪುರಿ ಪೀಠದ ಶ್ರೀ ರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯ ಹೊನ್ನಾಳಿಯಲ್ಲಿ ರಂಭಾಪುರಿ ಜಗದ್ಗುರು ಯಡಿಯೂರಪ್ಪ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು. ‘ಯಡಿಯೂರಪ್ಪ ಸಿಎಂ ಆಗಿದ್ದಾಗ ಕೂಡ ಕಾಲು ಎಳೆಯುವ ಜನರಿದ್ದರು ಈಗ ವಿಜಯೇಂದ್ರ ಅವರಿಗೂ ಇದ್ದಾರೆ. ರಾಜ್ಯದಲ್ಲಿ ಎರಡು ಸ್ಥಾನ ಇದ್ದ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು ಯಡಿಯೂರಪ್ಪ. ಎರಡು ಸ್ಥಾನದಿಂದ ಅಧಿಕಾರ ಹಿಡಿಯುವ ಮಟ್ಟಿಗೆ ಪಕ್ಷವನ್ನು ಬೆಳೆಸಿದ್ದಾರೆ. ಎಲ್ಲ ಸಮುದಾಯದವರ ಭಾವನೆಯನ್ನು ಅರಿತು ಕೆಲಸ ಮಾಡಿದವರು ಯಡಿಯೂರಪ್ಪನವರು’ ಎಂದು ತಿಳಿ ಹೇಳಿದರು.
ಈ ಹಿಂದೆ ಚುನಾವಣೆಯಲ್ಲಿ ಯಾವ ರೀತಿ ದುಷ್ಪರಿಣಾಮ ಆಯಿತೋ ಅದೇ ರೀತಿ ಆಗುತ್ತದೆ. ವೀರಶೈವ ಲಿಂಗಾಯತರನ್ನು ಕಡಗಣನೆ ಮಾಡಿದರೆ ಪಕ್ಷಕ್ಕೆ ನಷ್ಟ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಬಿಜೆಪಿಯಲ್ಲಿ ಎರಡು ಮೂರು ಗುಂಪುಗಳಾಗದೇ ಪರಸ್ಪರ ಒಂದಾಗಿ ಕೆಲಸ ಮಾಡಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಆಶಾದಾಯಕವಾಗಿ ಜನರು ಬೆಂಬಲ ನೀಡಲಿದ್ದಾರೆ. ಈ ರೀತಿ ಕಚ್ಚಾಡುತ್ತಾ ಹೋದರೆ ಇದರ ಲಾಭವನ್ನು ಬೇರೆಯವರು ಪಡೆಯುತ್ತಾರೆ. ಅದಷ್ಟು ಬೇಗ ಕೇಂದ್ರ ನಾಯಕರು ಬಿಜೆಪಿ ಒಳಗಿನ ಬೇಗುದಿಗಳನ್ನು ತಣ್ಣಗಾಗಿಸಬೇಕು. ಎಲ್ಲಾ ವರ್ಗದ ಜನರನ್ನು ಕರೆದೊಯ್ಯುವ ಮುತ್ಸದ್ದಿಗಳ ಅವಶ್ಯಕತೆ ಇದೆ, ಅಂತವರನ್ನು ಕಾಪಾಡಿಕೊಳ್ಳಿ’ ಎಂದು ಕಿವಿ ಮಾತನ್ನೂ ಹೇಳಿದರು.
