Saturday, February 7, 2026
Homeರಾಜಕೀಯ2028ಕ್ಕೆ ಕುಮಾರಣ್ಣನನ್ನು ಸಿಎಂ ಮಾಡುವುದೇ ನಮ್ಮ ಗುರಿ: ಹಾಸನದಲ್ಲಿ ನಿಖಿಲ್ ಕುಮಾರಸ್ವಾಮಿ ಗುಡುಗು

2028ಕ್ಕೆ ಕುಮಾರಣ್ಣನನ್ನು ಸಿಎಂ ಮಾಡುವುದೇ ನಮ್ಮ ಗುರಿ: ಹಾಸನದಲ್ಲಿ ನಿಖಿಲ್ ಕುಮಾರಸ್ವಾಮಿ ಗುಡುಗು

ಹಾಸನ: ನಾನು ಚುನಾವಣೆಯಲ್ಲಿ ಮೂರು ಬಾರಿ ಸೋತಿದ್ದರೂ ಧೃತಿಗೆಡುವುದಿಲ್ಲ. ರಾಜ್ಯವು ಈಗ ರಾಕ್ಷಸರ ಕೈಯಲ್ಲಿದೆ, ಇದನ್ನು ಮತ್ತೆ ರಾಮರಾಜ್ಯ ಮಾಡಲು ಮತ್ತು ಕುಮಾರಣ್ಣನನ್ನು 2028ಕ್ಕೆ ಈ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವುದೇ ನನ್ನ ಮುಂದಿರುವ ಏಕೈಕ ಗುರಿ. ಪಕ್ಷಕ್ಕಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಯುವ ಜನತಾದಳದ ನಾಯಕ ನಿಖಿಲ್ ಕುಮಾರಸ್ವಾಮಿ ಅಬ್ಬರಿಸಿದರು.

ಹಾಸನದ ಬಿ.ಜಿ.ಎಸ್.ಕೆ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬದ ‘ಜನತಾ ಸಮಾವೇಶ‘ ದಲ್ಲಿ ಮಾತನಾಡಿದರು.

ನಿಖಿಲ್ ಕುಮಾರಸ್ವಾಮಿ ಭಾಷಣದ ಮುಖ್ಯಾಂಶಗಳು

  1. ಹಾಸನ ಜೆಡಿಎಸ್‌ನ ಭದ್ರಕೋಟೆ: ಹಾಸನ ಜಿಲ್ಲೆಯ ಜನರ ಹೃದಯದಲ್ಲಿ ಜೆಡಿಎಸ್ ಶಾಶ್ವತ ಸ್ಥಾನ ಪಡೆದಿದೆ. ಈ ಜಿಲ್ಲೆಯಿಂದ ಜೆಡಿಎಸ್ ಅನ್ನು ಓಡಿಸಲು ಯಾರಿಂದಲೂ ಸಾಧ್ಯವಿಲ್ಲ. ದೇವೇಗೌಡರು ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸಲು ಈ ಜಿಲ್ಲೆಯ ಜನರೇ ಕಾರಣ. ಪ್ರಾದೇಶಿಕ ಪಕ್ಷವನ್ನು ಕಟ್ಟಿ ಇಂದಿಗೂ ಉಳಿಸಿಕೊಂಡು ಬಂದಿರುವ ದೇವೇಗೌಡರು ಯುವ ಪೀಳಿಗೆಗೆ ಮಾದರಿ ಎಂದು ನಿಖಿಲ್ ಬಣ್ಣಿಸಿದರು.
  2. ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಡಾಮಂಡಲ: ಕಳೆದ ಎರಡೂವರೆ ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯವಾಗಿದೆ. ಅವರ ಸಮಾವೇಶಗಳ ಏಕೈಕ ಸಾಧನೆ ಎಂದರೆ ದೇವೇಗೌಡರ ಕುಟುಂಬವನ್ನು ಟೀಕಿಸುವುದು ಮಾತ್ರ. ರಾಜ್ಯದಲ್ಲಿ ಇಂದು ದುರಾಡಳಿತ ನಡೆಯುತ್ತಿದ್ದು, ಭ್ರಷ್ಟಾಚಾರ ಮಿತಿಮೀರಿದೆ ಎಂದು ಕಿಡಿಕಾರಿದರು.
  3. ಶಾಸಕ ಶಿವಲಿಂಗೇಗೌಡರಿಗೆ ಟಾಂಗ್: ಹೆಸರು ಹೇಳದೆಯೇ ಅರಸೀಕೆರೆ ಶಾಸಕ ಶಿವಲಿಂಗೇಗೌಡ ವಿರುದ್ಧ ವಾಗ್ದಾಳಿ ನಡೆಸಿದ ನಿಖಿಲ್, ನಮ್ಮಲ್ಲೇ ತಿಂದು, ಜೆಡಿಎಸ್ ಟಿಕೆಟ್ ಪಡೆದು ಗೆದ್ದು, ಬೆಳೆದ ಮೇಲೆ ಹೆತ್ತ ತಾಯಿಯಂತಿರುವ ಪಕ್ಷಕ್ಕೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
  4. ಕುಮಾರಣ್ಣನ ಆರೋಗ್ಯ ಮತ್ತು 2028ರ ಗುರಿ: “ಕುಮಾರಣ್ಣನ ಆರೋಗ್ಯದ ಬಗ್ಗೆ ಯಾರೂ ಚಿಂತೆ ಮಾಡಬೇಡಿ, ಅವರು ಶತಾಯುಷಿ. ಅವರ ತಂದೆ-ತಾಯಿ ಮಾಡಿದ ಪುಣ್ಯ ಹಾಗೂ ಜನರ ಆಶೀರ್ವಾದ ಅವರ ಮೇಲಿದೆ. ಅವರನ್ನು ಸಿಎಂ ಮಾಡಲು ನಾನು ದಿನಕ್ಕೆ 18 ಗಂಟೆ ಕೆಲಸ ಮಾಡಲು ಸಿದ್ಧನಿದ್ದೇನೆ. ಈಗಾಗಲೇ 52 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದು, ಶೀಘ್ರವೇ ಎರಡನೇ ಹಂತದ ಪ್ರವಾಸ ಆರಂಭಿಸುತ್ತೇನೆ” ಎಂದು ಘೋಷಿಸಿದರು.
  5. ಮುಂದಿನ ಚುನಾವಣೆಗಳಿಗೆ ಕರೆ: ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಅಧಿಕಾರ ಕೊಡಿಸಲು ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ಈ ಐತಿಹಾಸಿಕ ಸಮಾವೇಶದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಎ. ಮಂಜು, ವೆಂಕಟರಾವ್ ನಾಡಗೌಡ, ಹೆಚ್.ಕೆ. ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಡಾ. ಸೂರಜ್ ರೇವಣ್ಣ, ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣಾ ರೆಡ್ಡಿ, ಶಾಸಕ ಸ್ವರೂಪ್ ಪ್ರಕಾಶ್ ಸೇರಿದಂತೆ ಅನೇಕ ಹಿರಿಯ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!