ಲಕ್ನೋ: ಕಳ್ಳತನಕ್ಕೆ ಅಂತಾ ಬಂದ ಕಳ್ಳನಿಗೆ ಎಸಿ ಗಾಳಿ ಗಡದ್ ನಿದ್ದೆ ಬಂದು ಪೊಲೀಸರ ಕೈಗೆ ತಗಲ್ಕೊಂಡ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಲಕ್ನೋದ ಇಂದಿರಾನಗರದಲ್ಲಿರುವ ಡಾ. ಸುನೀಲ್ ಪಾಂಡೆ ಎಂಬವರ ಮನೆಗೆ ಭಾನುವಾರ ಮುಂಜಾನೆ ವ್ಯಕ್ತಿಯೊಬ್ಬ ಯಾರೂ ಇಲ್ಲದ್ದನ್ನು ನೋಡಿ ಕಳ್ಳತನ ಮಾಡಲು ಬಂದಿದ್ದಾನೆ. ಮದ್ಯ ಸೇವಿಸಿ ಕಳ್ಳತನಕ್ಕೆ ಬಂದಿದ್ದ ಕಳ್ಳ ಮನೆಯಲ್ಲಿ ಎಸಿ ಆನ್ ಆಗಿರೋದನ್ನು ನೋಡಿ ಸ್ವಲ್ಪ ಹೊತ್ತು ರಿಲ್ಯಾಕ್ಸ್ ಮಾಡೋಣ ಅಂತಾ . ಸೋಫಾದಲ್ಲಿ ಬಳಿ ಎಸಿಯ ತಣ್ಣಗೆಯ ಗಾಳಿಗೆ ಮೈಯೊಡ್ಡಿ ಕೂತಿದ್ದಾನೆ. ಹಾಗೇ ಕೂತವನಿಗೆ ಅಲ್ಲಿ ಗಡದ್ ನಿದ್ದೆ ಬಂದಿದೆ.. ಮನೆಯ ಮಾಲೀಕ ಮನೆಯಲ್ಲಿ ಇಲ್ಲದೆ ಇದ್ದಾಗ, ಮನೆಯ ಗೇಟ್ ಹೇಗೆ ತೆರೆದಿದೆ ಎಂದು ಅಕ್ಕಪಕ್ಕದವರು ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಈ ವೇಳೆ ಡಾ. ಪಾಂಡೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ, ಎಸಿ ಆನ್ ಮಾಡಿ ಆರಾಮವಾಗಿ ಮಲಗಿದ್ದ ಕಳ್ಳನನ್ನು ನೋಡಿದ್ದಾರೆ. ಆತನನ್ನು ಎಚ್ಚರಿಸಿ ವಿಚಾರಿಸಿದಾಗ ಆತ ಕಳ್ಳತನಕ್ಕೆಂದು ಮನೆಯೊಳಗಡೆ ಬಂದಿದ್ದಾಗಿ ಹೇಳಿದ್ದಾನೆ.ಸದ್ಯ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದೆಂದು ಪೊಲೀಸರು ಹೇಳಿದ್ದಾರೆ.