ಬೆಂಗಳೂರು: ಪವಿತ್ರ ರಮಝಾನ್ ತಿಂಗಳ ಚಂದ್ರ ದರ್ಶನವಾಗಿದ್ದು, (ಫೆಬ್ರವರಿ 19) ಇಂದಿನಿಂದ ಗುರುವಾರ ರಮಝಾನ್ ಉಪವಾಸ ವ್ರತ (ರೋಜಾ) ಆರಂಭಗೊಳ್ಳಲಿದೆ ಎಂದು ರಾಜ್ಯ ಚಂದ್ರ ದರ್ಶನ ಸಮಿತಿಯ ಸಂಚಾಲಕ ಮೌಲಾನಾ ಮನ್ಸೂರ್ ಇಮ್ರಾನ್ ರಶಾದಿ ಅವರು ಘೋಷಿಸಿದ್ದಾರೆ.
ಬುಧವಾರ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಮಂಡಳಿಯ ಕಚೇರಿಯಲ್ಲಿ ನಡೆದ ಚಂದ್ರ ದರ್ಶನ ಸಮಿತಿ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಯಾವುದೇ ಜಿಲ್ಲೆಗಳಲ್ಲಿ ಚಂದ್ರ ದರ್ಶನವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ, ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ ಹಾಗೂ ದೇಶದ ಇತರ ಭಾಗಗಳಾದ ಬಿಹಾರ, ಓಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಚಂದ್ರ ದರ್ಶನವಾದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಇಸ್ಲಾಮಿಕ್ ನಿಯಮಗಳ ಪ್ರಕಾರ ಗುರುವಾರದಿಂದಲೇ ಪವಿತ್ರ ರಮಝಾನ್ ಮಾಸದ ಉಪವಾಸ ವ್ರತಾಚರಣೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮೌಲಾನಾ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಮೌಲಾನಾ ಏಜಾಝ್ ಅಹ್ಮದ್ ನದ್ವಿ ಸೇರಿದಂತೆ ಅನೇಕ ಪ್ರಮುಖ ಉಲಮಾಗಳು ಮತ್ತು ಧಾರ್ಮಿಕ ಮುಖಂಡರು ಭಾಗವಹಿಸಿದ್ದರು. ಈ ಘೋಷಣೆಯೊಂದಿಗೆ ಇಂದಿನಿಂದಲೇ ಮಸೀದಿಗಳಲ್ಲಿ ವಿಶೇಷ ತರಾವೀಹ್ ಪ್ರಾರ್ಥನೆಗಳು ಆರಂಭವಾಗಲಿದ್ದು, ಮುಸ್ಲಿಂ ಬಾಂಧವರು ಒಂದು ತಿಂಗಳ ಕಾಲ ಭಕ್ತಿ ಮತ್ತು ಶಿಸ್ತಿನಿಂದ ಉಪವಾಸ ವ್ರತದಲ್ಲಿ ತೊಡಗಲಿದ್ದಾರೆ.
