Monday, February 9, 2026
Homeಜಿಲ್ಲಾಸುದ್ದಿಜಯಪುರ: ಬಿಜೆಪಿಯವರು ಆಸ್ಪತ್ರೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಿರುವುದು ಹಾಸ್ಯಾಸ್ಪದ: ಫಣಿರಾಜ್

ಜಯಪುರ: ಬಿಜೆಪಿಯವರು ಆಸ್ಪತ್ರೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಿರುವುದು ಹಾಸ್ಯಾಸ್ಪದ: ಫಣಿರಾಜ್

ಜಯಪುರ : ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರು ಶಾಸಕರಾದ ನಂತರ ಮೇಗುಂದಾ ಹೋಬಳಿ ಕೇಂದ್ರ ಜಯಪುರಕ್ಕೆ ರೂ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಿದ್ದು. ಆಸ್ಪತ್ರೆಗೆ ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಅರವಳಿಕೆ ತಜ್ಞರು ಸೇರಿದಂತೆ ಒಟ್ಟು ಹದಿನಾರು ಸಿಬ್ಬಂದಿ ನೇಮಕಕ್ಕೆ ತಾಂತ್ರಿಕ ಅನುಮೋದನೆ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಆಸ್ಪತ್ರೆ ಆರಂಭವಾಗಲಿದ್ದು, ಇದು ಗೊತ್ತಿದ್ದರೂ ಬಿಜೆಪಿಯ ಕೆಲ ಮುಖಂಡರು ಆಸ್ಪತ್ರೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ, ಪತ್ರಿಕಾ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದ್ದು ಇದು ರಾಜಕೀಯ ಪ್ರಚಾರದ ತಂತ್ರವಾಗಿದೆ ಎಂದು ಜಯಪುರ ಗ್ರಾಮ ಪಂಚಾಯ್ತಿ ಸದಸ್ಯ ಫಣಿರಾಜ್ ಹೇಳಿದರು.

ಆರೋಗ್ಯ ಇಲಾಖೆಗೆ ಕಟ್ಟಡ ಹಸ್ತಾಂತರ ಆದ ಮೇಲೆ ಸಿಬ್ಬಂದಿ ನೇಮಕ ಮತ್ತು ಸಲಕರಣೆಗಳು ಸರ್ಕಾರದ ನೀತಿಯಂತೆ ಬರಲಿದ್ದು, ಸಿಬ್ಬಂದಿ

ನೇಮಕಾತಿ ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಎಕ್ಸ್ ರೇ ಮೆಷಿನ್ ಸೇರಿದಂತೆ ಕೆಲವು ವೈದ್ಯಕೀಯ ಉಪಕರಣಗಳು ಬರಲಿದೆ. ಜಯಪುರ ಮತ್ತು ಸುತ್ತಮುತ್ತಲಿನ ಜನತೆಯ ದಶಕಗಳ ಬೇಡಿಕೆಯಾದ ಸುಸಜ್ಜಿತ ಆಸ್ಪತ್ರೆ ಉದ್ಘಾಟನೆಗೆ ಸಿದ್ಧವಾಗಿದ್ದು, ಬಿಜೆಪಿಗರು ಆಸ್ಪತ್ರೆ ಉದ್ಘಾಟನೆಗೆ ಅವಸರ ಮಾಡುತ್ತಿರುವುದು ಒಂದು ಪ್ರಚಾರ ತಂತ್ರ.

ಶೃಂಗೇರಿ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ,ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಮತ್ತು ಜಿಲ್ಲಾ ಮಂತ್ರಿಯಾಗಿದ್ದ ಮಾಜಿ ಶಾಸಕ ಡಿ.ಎನ್.ಜೀವರಾಜ್ ಜಯಪುರ ಮತ್ತು ಸುತ್ತಮುತ್ತಲಿನ ನಾಗರೀಕರಿಗೆ ತಮ್ಮ ಅವಧಿಯಲ್ಲಿ ಜನ ಶಾಶ್ವತವಾಗಿ ನೆನಪಿಡುವಂತಹ ಒಂದೇ ಒಂದು ಕಾಮಗಾರಿ ಕೂಡ ಮಾಡಿಸಲಿಲ್ಲ.
ಬಿಜೆಪಿಯಿಂದ ಕಳೆದ ಎರಡು ಮೂರು ದಶಕಗಳಿಂದ ಸಂಸದರು ಆಯ್ಕೆ ಆಗಿದ್ದರೂ ಯಾವುದೇ ಕಾಮಗಾರಿ ಮಾಡಿರುವುದಿಲ್ಲ.

ಕಳೆದ ಎರಡು ಬಾರಿ ಸ್ಥಳೀಯ ಸಂಸ್ಥೆಯ ಕ್ಷೇತ್ರದಿಂದ ಬಿಜೆಪಿ ಸದಸ್ಯರೇ ಎಂ.ಎಲ್.ಸಿ. ಆಗಿ ಆಯ್ಕೆಯಾಗಿದ್ದರೂ ಅವರಿಂದ ಕೂಡ ಜಯಪುರದ ಅಭಿವೃದ್ಧಿಗೆ ಯಾವುದೇ ಕೊಡುಗೆ ಇಲ್ಲ. ಈ ಬಗ್ಗೆ ಚಕಾರವೆತ್ತದ ಬಿಜೆಪಿಗರು ಜಯಪುರದ ಅಭಿವೃದ್ಧಿಗೆ ಜಯಪುರ ಪಟ್ಟಣದ ಅಭಿವೃದ್ಧಿಗೆ ಹತ್ತಾರು ಕೋಟಿಗಳ ಅನುದಾನ ನೀಡಿರುವ ಶಾಸಕ ರಾಜೇಗೌಡರ ವಿರುದ್ದ ಮಾತನಾಡುತ್ತಿರುವುದು ಸರಿಯಲ್ಲ. ಇವರು ಪ್ರತಿಭಟನೆ ಮಾಡಿರುವುದು ರಾಜಕೀಯ ನಾಟಕವಾಗಿದ್ದು ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ.

ಬಿಜೆಪಿ ಕಾರ್ಯಕರ್ತರಿಗೆ ಜಯಪುರ ನಾಗರೀಕರ ಬಗ್ಗೆ ಏನಾದರೂ ಕಳಕಳಿ ಇದ್ದರೆ ಜಯಪುರದಲ್ಲಿ ವಿದ್ಯುತ್ ನಿಲುಗಡೆಯಾದರೆ ಬಿ.ಎಸ್.ಎನ್.ಎಲ್. ಮೊಬೈಲ್ ಮತ್ತು ಅಂತರ್ಜಾಲ ಸಂಪೂರ್ಣ ನಿಲುಗಡೆಯಾಗಿ ಜನ ಪರದಾಡುವಂತಾಗುತ್ತದೆ. ಇಲ್ಲಿನಮೊಬೈಲ್ ಟವರ್ಗೆ ಡೀಸೆಲ್‌ ಸರಬರಾಜು ಮಾಡಲು ಕೇಂದ್ರ ಸರ್ಕಾರ ಮತ್ತು ಸಂಸದರ ಗಮನ ಸೆಳೆಯಲು ಪ್ರತಿಭಟಿಸುವುದರಿಂದ ಜನರಿಗೆ ಒಳಿತಾಗಲಿದೆ.

ರಸ್ತೆ, ಸೇರಿದಂತೆ ಇತರೆ ಅಭಿವೃದ್ಧಿಗೆ ಹಣ ನೀಡಿರುವ ಜೊತೆಗೆ ಜಯಪುರದ ಗಣಪತಿ ದೇವಸ್ಥಾನದ ಕಾಂಕ್ರಿಟ್ ವಾಲ್ ನಿರ್ಮಾಣಕ್ಕೆ, ಗಣಪತಿ ಪೆಂಡಾಲ್ ನಿರ್ಮಾಣಕ್ಕೆ, ದುರ್ಗಾಪರಮೇಶ್ವರಿ ದೇವಾಲಯದ ಭವನ ನಿರ್ಮಾಣ ಸೇರಿದಂತೆ ಚರ್ಚು, ಮಸೀದಿಯ ಕಾಮಗಾರಿಗೂ ಶಾಸಕರು ಅನುಧಾನ ನೀಡಿದ್ದಾರೆ. ಊರಿನ ಅಭಿವೃದ್ಧಿಗೆ ಕನಿಷ್ಠ ಕೊಡುಗೆ ನೀಡದವರಿಗೆ ಅಭಿವೃದ್ಧಿಗೆ ವೇಗ ನೀಡಿದವರ ವಿರುದ್ಧ ಪ್ರತಿಭಟಿಸಲು ಯಾವುದೇ ನೈತಿಕ ಹಕ್ಕು ಇರುವುದಿಲ್ಲ. ಬಿಜೆಪಿಗರಿಗೆ ನಿಜವಾದ ಕಾಳಜಿ ಇದ್ದರೆ ಹಾಲಿ ಸಂಸದರಿಂದ ಜಯಪುರ ಅಭಿವೃದ್ಧಿಗೆ ಅನುಧಾನ ಮೀಸಲಿರಿಸಲಿ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!