ಹಾಸನ : ವಿಶ್ವ ಪಾರಂಪರಿಕ ತಾಣಗಳು ಹಾಸನ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಪ್ರವಾಸೋದ್ಯಮದಲ್ಲಿ ಶ್ರೀಮಂತವಾಗಿರುವ ಜಿಲ್ಲೆ ನಮ್ಮದು. ಪ್ರವಾಸಿಗರ ಸ್ನೇಹಿಯಾಗಿ ಪ್ರವಾಸೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಡೆಸ್ಟಿನಿ ರೈಡರ್ಸ್ ಇವರ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ದೊಡ್ಡ ಗದ್ದುವಳ್ಳಿ ಲಕ್ಷ್ಮೀದೇವಿ ದೇವಾಲಯದಿಂದ ಹಗರೆ ಮಾರ್ಗವಾಗಿ ಹಳೇಬೀಡು ದೇವಸ್ಥಾನದವರೆಗೂ ಆಯೋಜಿಸಿದ್ದ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಸ್ವತಃ ಬೈಕ್ ಚಾಲನೆ ಮಾಡಿ, ಹಳೇಬೀಡಿನಲ್ಲಿ ಮಾತನಾಡಿದ ಅವರು ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಪ್ರವಾಸೋದ್ಯಮ ಸುಸ್ಥಿರತೆ ಜೊತೆ ಜೊತೆಯಾಗಿ ಬೆಳೆಯಬೇಕು ಎಂದರು.
ಪ್ರವಾಸೋದ್ಯಮ ಇಲಾಖೆ ಬಹಳಷ್ಟು ಅಭಿವೃದ್ಧಿಯಾಗಬೇಕಾಗಿದೆ. ಪ್ರವಾಸೋದ್ಯಮ ಸ್ಥಳಗಳ ಬಗ್ಗೆ ಕೇವಲ ಪ್ರಚಾರಪಡಿಸುವುದಲ್ಲದೆ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಕೂಡ ಒದಗಿಸಿ ಕೊಡಬೇಕು. ಪುರಾತನ ಮತು ಐತಿಹಾಸಿಕ ಸ್ಥಳಗಳನ್ನು ಸೂಕ್ತವಾಗಿ ಸಂರಕ್ಷಣೆ ಮಾಡುವುದರ ಮೂಲಕ ಮುಂದಿನ ಪೀಳಿಗೆಗೆ ಉಳಿಸಬೇಕು ಜೊತೆಗೆ ಆ ಸ್ಥಳದ ಇತಿಹಾಸದ ಕುರಿತಾಗಿ ತಿಳಿ ಹೇಳಬೇಕು ಎಂದರು.
ಶಿಲ್ಪಕಲೆಗೆ ಪ್ರಸಿದ್ಧವಾದ ತಾಣ ಹಳೇಬೀಡಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿದ ಸ್ಥಳವಾಗಿದೆ. ಇಲ್ಲಿಯೂ ವಾಹನದ ನಿಲುಗಡೆಗೆ ಸ್ಥಳಾವಕಾಶದ ಸಮಸ್ಯೆ, ಸ್ವಚ್ಛತೆ, ರಸ್ತೆ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಕಂಡುಬAದಿದೆ. ಸಾರ್ವಜನಿಕರಿಗೆ ತೊಂದರೆಯಾಗದAತೆ ಹಾಳಾಗಿರುವ ಸ್ಲಾಬ್ ಸರಿಪಡಿಸಿ, ವ್ಯವಸ್ಥಿತವಾಗಿ ಕಸ ವಿಲೇವಾರಿ ಮಾಡುವುದರ ಜೊತೆಗೆ ಅಲ್ಲಲ್ಲಿಯೇ ಕಸದ ಬುಟ್ಟಿಗಳನ್ನಿಡಲು ಸೂಚಿಸಿದ ಅವರು ದೇವಸ್ಥಾನದ ಸುಂದರಿ ಕರಣಕ್ಕಾಗಿ ದೇವಾಲಯದ ಆವರಣದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ, ವಾಹನಗಳನ್ನು ಶಿಸ್ತಿನಿಂದ ನಿಲ್ಲಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಪದೇ ಪದೇ ಹೊಯ್ಸಳ ಉತ್ಸವ ಕುರಿತು ಕೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಹೊಯ್ಸಳ ಉತ್ಸವ ಆಚರಣೆಗೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ರಸ್ತೆಯ ಎರಡು ಬದಿಗಳಲ್ಲಿ ಅಂಗಡಿಗಳು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವುದರಿಂದ, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಫುಡ್ ಕೋರ್ಟ್ ರೀತಿಯಲ್ಲಿ ಇರಲಿ. ಪಾದಚಾರಿಗಳ ಸಂಚಾರಕ್ಕೆ ತೊಂದರೆ ಆಗದಂತೆ ತೆರವುಗೊಳಿಸಲು ಸೂಚಿಸಿದರು.
ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದರಿಂದ ಜನರಿಗೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ರಸ್ತೆ ಬದಿಯ ವ್ಯಾಪಾರಿಗಳು ಅಂಗಡಿ ಮುಂದೆ ಕಸದ ಬುಟ್ಟಿಗಳನ್ನು ಇಡುವಂತೆ ನೋಟಿಸ್ ನೀಡಲು ಪಿ.ಡಿ.ಓ.ಸೂಚನೆ ನೀಡಿದರು.
ಹಳೇಬೀಡು ದೇವಾಲಯದ ಮುಂಭಾಗದಲ್ಲಿ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ತುರ್ತಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಕರೆ ನೀಡಿದ್ದಾರೆ.
