Saturday, March 28, 2026
Homeಜಿಲ್ಲಾಸುದ್ದಿಹಾಸನದಲ್ಲಿ ಕಾಡಾನೆಗಳಾದ ಭೀಮಾ - ಕ್ಯಾಪ್ಟನ್ ನಡುವೆ ಕಾದಾಟ: ಒಂದು ದಂತ ಕಳೆದುಕೊಂಡ ಭೀಮಾ!

ಹಾಸನದಲ್ಲಿ ಕಾಡಾನೆಗಳಾದ ಭೀಮಾ – ಕ್ಯಾಪ್ಟನ್ ನಡುವೆ ಕಾದಾಟ: ಒಂದು ದಂತ ಕಳೆದುಕೊಂಡ ಭೀಮಾ!

ಹಾಸನ: ಕಾಡಾನೆಗಳಾದ ಭೀಮಾ ಹಾಗೂ ಕ್ಯಾಪ್ಟನ್ ನಡುವಿನ ಭೀಕರ ಕಾಳಗದಲ್ಲಿ ಭೀಮಾ ಒಂದು ದಂತ ಕಳೆದುಕೊಂಡಿರುವ ಘಟನೆ ಬೇಲೂರು ತಾಲ್ಲೂಕಿನ ಜಗಬೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಎರಡು ದೈತ್ಯಾಕಾರದ ಕಾಡಾನೆಗಳು ಮದದಲ್ಲಿದ್ದವು. ಇಂದು ಜಗಬೋರನಹಳ್ಳಿ ಗ್ರಾಮದ ಬಳಿ ಭೀಮಾ ಹಾಗೂ ಕ್ಯಾಪ್ಟನ್ ಎದುರಾಗಿ ಭೀಕರ ಕಾಳಗ ನಡೆಸಿವೆ. ಕಾಳಗದ ವೇಳೆ ಸಿಟ್ಟಿನಲ್ಲಿ ಭೀಮಾ ಮರಕ್ಕೆ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಭೀಮನ ಒಂದು ದಂತ ಮುರಿದು ಬಿದ್ದಿದೆ. 

ದಂತ ಕಳೆದುಕೊಂಡು ಒಂಟಿಸಲಗ ಭೀಮಾ ಘೀಳಿಡುತ್ತಿದ್ದು, ಭೀಮನ ಸೊಂಡಿಲಿನ ಬಳಿ ರಕ್ತ ಸುರಿಯುತ್ತಿದೆ. ಕಾಫಿ‌ ತೋಟದಲ್ಲಿ ನಿಂತು ಭೀಮಾ ನರಳಾಡಿದ. ಕಾಳಗದಲ್ಲಿ ಕ್ಯಾಪ್ಟನ್‌ಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ಕಾಡಾನೆ ಭೀಮಾ ಮಲೆನಾಡು ಭಾಗದ ಜನರ ಪ್ರೀತಿ ಪಾತ್ರವಾಗಿದ್ದಾನೆ. ದಂತ ಮುರಿದುಕೊಂಡಿದ್ದನ್ನು ಕಂಡು ಜನರು ಮರುಕಪಟ್ಟಿದ್ದಾರೆ.

ಕಳೆದ ಐದಾರು ವರ್ಷಗಳಿಂದ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಬೇಲೂರು ತಾಲ್ಲೂಕಿನ ವಿವಿದೆಡೆ ಸಂಚಾರ ಮಾಡುತ್ತಾ, ಶಾಂತವಾಗಿ ಓಡಾಡುತ್ತಿದ್ದ ಭೀಮ ಇದೀಗ ಮತ್ತೆ ಆತಂಕ ಮೂಡಿಸಿದೆ. ಕಳೆದ ಒಂದು ವಾರದಿಂದ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಹಲವು ಗ್ರಾಮಗಳ ಮುಖ್ಯಬೀದಿಯಲ್ಲೇ ನಡೆದು ಹೋಗಿದ್ದ ಭೀಮ, ಇಂದು ಮತ್ತೊಂದು ದೈತ್ಯಾಕಾರದ ಕ್ಯಾಫ್ಟನ್ ಹೆಸರಿನ ಕಾಡಾನೆ ಜೊತೆಗೆ ಓಡಾಡುತ್ತಾ ಭೀತಿ ಸೃಷ್ಟಿಸಿದೆ.

2023ರ ಆಗಸ್ಟ್ ತಿಂಗಳಲ್ಲಿ ಬೆನ್ನಿನ ಕೆಳಬಾಗದಲ್ಲಿ ದೊಡ್ಡ ಗಾಯವಾಗಿ ನರಳಾಡಿದ್ದ ಭೀಮನಿಗೆ ಸೆಪ್ಟೆಂಬರ್ 25ರಂದು ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿದ್ದರು. ಆದರೆ ಅದು ಪರಿಣಾಮಕಾರಿಯಾಗದ್ದರಿಂದ ಆಗಸ್ಟ್ 31ರಂದು ಭೀಮನಿಗೆ ಅರವಳಿಕೆ ಮದ್ದು ನೀಡಿ ಚಿಕಿತ್ಸೆ ನೀಡಲಾಗಿತ್ತು. ಆಪರೇಷನ್ ನಡೆಸುತ್ತಿದ್ದ ವೇಳೆ ಮದವೇರಿದ್ದ ಭೀಮ ಏಕಾ ಏಕಿ ಅಂದಿನ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ದಾಳಿ ಮಾಡಿ ಕೊಂದಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!