ವಿಮಾನಯಾನ ಸಂಸ್ಥೆ ಇಂಡಿಗೋದಲ್ಲಿ ಸತತ ಮೂರನೇ ದಿನವು ಕಾರ್ಯಾಚರಣೆಯಲ್ಲಿ ಆಡಚಣೆಗಳು ಮುಂದುವರೆದಿದೆ. ಇಂದು (ಗುರುವಾರ) ದೆಹಲಿ, ಮುಂಬೈ ಮತ್ತು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ 250ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಹೊಸ ಹಾರಾಟ ಕರ್ತವ್ಯ ನಿಯಮಗಳನ್ನು (FDTL) ಜಾರಿಗೊಳಿಸಿದ ನಂತರ ಉಂಟಾಗಿರುವ ಸಿಬ್ಬಂದಿ ಮತ್ತು ಪೈಲಟ್ ಕೊರತೆಯಿಂದ ಈ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ 86, ದೆಹಲಿ ವಿಮಾನ ನಿಲ್ದಾಣದಲ್ಲಿ 95 ವಿಮಾನಗಳು ರದ್ದಾಗಿವೆ. ಈ ಬಿಕ್ಕಟ್ಟಿನಿಂದಾಗಿ ಬುಧವಾರದಂದು ಆರು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಇಂಡಿಗೋದ ಆನ್-ಟೈಮ್ ಪರ್ಫಾರ್ಮೆನ್ಸ್ (OTP) ಕೇವಲ 19.7% ಕ್ಕೆ ಕುಸಿದಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಇಂದು ಸಹ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗುತ್ತು. ಸುಮಾರು 72 ರಿಂದ 73 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವುಂಟಾಗಿ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಗುರಿಯಾದರು. ಹಲವಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ರಾತ್ರಿ ಕಳೆಯುವಂತಾಯಿತು. ಟರ್ಮಿನಲ್ 1ರೊಳಗೆ ಜನದಟ್ಟಣೆ ಹೆಚ್ಚಾಗಿದ್ದು, ಆಸನಗಳು ಸೀಮಿತವಾಗಿದ್ದರಿಂದ ಅನೇಕ ಪ್ರಯಾಣಿಕರು ನೆಲದ ಮೇಲೆ ಕುಳಿತುಕೊಳ್ಳಬೇಕಾಯಿತು. ಹಿರಿಯ ಪ್ರಯಾಣಿಕರು ಮತ್ತು ಮಕ್ಕಳಿರುವ ಕುಟುಂಬಗಳು ಪರಿಸ್ಥಿತಿ ನಿಭಾಯಿಸಲು ಹೆಣಗಾಡಿದರು. ವಿಮಾನಯಾನ ಸಂಸ್ಥೆಯು ಸ್ಪಷ್ಟವಾದ ಮಾಹಿತಿ ನೀಡದಿರುವ ಬಗ್ಗೆ ಕೆಲ ಪ್ರಯಾಣಿಕರು ಹತಾಶೆಗೊಂಡು ವಿಮಾನಯಾನ ಕೌಂಟರ್‌ಗಳ ಬಳಿ ಪ್ರತಿಭಟನೆ ನಡೆಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಇದೇ ರೀತಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ (RGIA) ಗುರುವಾರದಂದು ಇಂಡಿಗೋ ವಿಮಾನಗಳ ಸಂಚಾರದಲ್ಲಿ ಸಾಕಷ್ಟು ವಿಳಂಬವಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು. ಸರತಿ ಸಾಲಿನಲ್ಲಿ ನಿಂತು ಸುಸ್ತಾಗಿ ಕೆಲ ಪ್ರಯಾಣಿಕರು ಗೊಂದಲ ಮತ್ತು ಆತಂಕಕ್ಕೀಡಾಗಿದ್ದರು. ಇವೆಲ್ಲಾ ಸಮಸ್ಯೆಗಳಿಂದ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಸಹ ಹೆಚ್ಚಾಗಿದೆ.
ಈ ನಡುವೆ, ಡಿಜಿಸಿಎಯು ಇಂಡಿಗೋದ ಕಾರ್ಯಾಚರಣೆಯಲ್ಲಿನ ಸಮಸ್ಯೆ ಕುರಿತು ತನಿಖೆ ನಡೆಸುತ್ತಿದೆ ಮತ್ತು ಘಟನೆ ಕುರಿತು ವಿಮಾನಯಾನ ಸಂಸ್ಥೆ ತಕ್ಷಣದ ವರದಿ ನೀಡಬೇಕು ಹಾಗೂ ಈ ಬಿಕ್ಕಟ್ಟಿನಿಂದ ಹೊರಬರಲು ಮುಂದಿನ ಕಾರ್ಯಯೋಜನೆಯನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ. ಅಲ್ಲದೆ, ಪೈಲಟ್ ಸಂಘಟನೆಯಾದ ‘ಫೆಡರೇಶನ್ ಆಫ್ ಇಂಡಿಯನ್ ಪೈಲಟ್ಸ್ ಸಂಸ್ಥೆ’ಯು ಇಂಡಿಗೋ ಎರಡು ವರ್ಷಗಳ ಕಾಲಾವಕಾಶ ಸಿಕ್ಕಿದ್ದರೂ ಹೊಸ ಎಫ್‌ಡಿಟಿಎಲ್ ನಿಯಮಗಳನ್ನು ಜಾರಿಗೊಳಿಸಲು ಯಾವುದೇ ತಯಾರಿ ಮಾಡಿಲ್ಲ ಎಂದು ತೀವ್ರವಾಗಿ ಟೀಕಿಸಿದೆ. ಅಲ್ಲದೆ, ಇಂಡಿಗೋ ತನ್ನ ಸಿಬ್ಬಂದಿಯ ಕೊರತೆಯನ್ನು ನಿವಾರಿಸಿ, ಹೊಸ ನಿಯಮಗಳನ್ನು ಪಾಲಿಸುವವರೆಗೆ ಅದರ ಹಾರಾಟ ವೇಳಾಪಟ್ಟಿಗೆ ಅನುಮೋದನೆ ನೀಡಬಾರದು ಮತ್ತು ಇಂಡಿಗೋಗೆ ನೀಡಲಾದ ಸ್ಲಾಟ್‌ಗಳನ್ನು ಇತರ ಸಮರ್ಥ ವಿಮಾನಯಾನ ಸಂಸ್ಥೆಗಳಿಗೆ ಹಂಚಿಕೆ ಮಾಡಬೇಕು ಎಂದು ಸಂಘಟನೆಯು ಡಿಜಿಸಿಎಗೆ ಮನವಿ ಮಾಡಿದೆ.
