ಚಿಕ್ಕಮಗಳೂರು: ನಕಲಿ ದಾಖಲೆಗಳನ್ನು ಆಧರಿಸಿ ನ್ಯಾಯಾಲಯದ ಆದೇಶಗಳನ್ನು ಪಡೆದು 500 ಎಕರೆ ಅರಣ್ಯ ಭೂಮಿಯನ್ನು ಕಬಳಿಸಲು ಯತ್ನಿಸಿದವರನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ. ವಂಚಕ ಮನ್ಮಥ್ ಗೌಡನನ್ನು ಬಂಧಿಸಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಡಿ ಈ ಬಂಧನ ನಡೆದಿದೆ.
ಮೂಡಿಗೆರೆ ತಾಲೂಕಿನಲ್ಲಿ ಸುಮಾರು 500 ಎಕರೆ ಭೂಮಿ ತನ್ನ ಪೂರ್ವಜರದ್ದು ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವುಗಳನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾನೆ ಎಂಬ ಆರೋಪ ಮನ್ಮಥ್ ಗೌಡ ಮೇಲಿದ್ದು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸುಮಾರು 1500 ಎಕರೆ ಭೂಮಿ ಕಬಳಿಕೆಗೂ ಸಂಚು ರೂಪಿಸಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಮೂಡಿಗೆರೆ ತಹಸೀಲ್ದಾರ್ ಅಶ್ವಿನಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ತನಿಖೆಯ ವೇಳೆ ಆರೋಪಿಯು ಸಂಪೂರ್ಣ ದಾಖಲೆಗಳನ್ನು ನಕಲಿ ಮಾಡಿರುವುದು ಬೆಳಕಿಗೆ ಬಂದಿದೆ. ಮನ್ಮಥ್ ಗೌಡ ಮೂಲತಃ ಮೂಡಿಗೆರೆ ತಾಲೂಕಿನ ಮರೆಬೈಲು ನಿವಾಸಿಯಾಗಿದ್ದು, ಕಡೂರಿನಲ್ಲಿ ತಲೆಮರಿಸಿಕೊಂಡಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸೂಚನೆಯ ಮೇರೆಗೆ ತನಿಖೆ ಆರಂಭವಾಗಿದ್ದು, ಇನಾಂ ಭೂಮಿ ಹೆಸರಿನಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿಯನ್ನು ಕಬಳಿಸಲು ನಡೆದ ಸಂಚು ಬಯಲಾಗಿತ್ತು. ಮನ್ಮಥ್ ಗೌಡ ಹಿಂದೆ ಪ್ರಭಾವಿಗಳ ಕೈವಾಡ ಇರುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ CID ತನಿಖೆಗೂ ಸೂಚನೆ ನೀಡುವುದಾಗಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ಮೂಡಿಗೆರೆ ಪೊಲೀಸರು, ವಂಚನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
