ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮತ್ತೆ ಪ್ರತಿಧ್ವನಿಸಿದ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಪ್ರಹಾರ ಶಬರಿಮಲೆ ಮಾಲೆ ಧರಿಸಿದ್ದಕ್ಕೆ ಈಗ ಮತ್ತೊಮ್ಮೆ ಜಿಲ್ಲೆಯಲ್ಲಿ ಇದೇ ವಿಚಾರವಾಗಿ ಗಲಾಟೆಯಾಗಿದ್ದು, ನಗರದ ಶಾಲೆಯೊಂದರಲ್ಲಿ ಅಯ್ಯಪ್ಪ ಮಾಲೆ ಹಾಕಿದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಹೌದು .. ನಗರದ ಸಂತ ಜೋಸೆಫ್ ಶಾಲೆಯಲ್ಲಿ ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಬಂದಿದ್ದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಯನ್ನು ಶಿಕ್ಷಕರು ಹೊಡೆದು ಶಾಲೆಯಿಂದ ಹೊರ ಕಳಿಸಿದ್ದಾರೆ ಎಂದು ಮಕ್ಕಳು ಮತ್ತು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆಯ ವಿರುದ್ಧ ಭಜರಂಗದಳ ಕಾರ್ಯಕರ್ತರು ಹಾಗೂ ನೂರಾರು ಅಯ್ಯಪ್ಪ ಮಾಲಾಧಾರಿಗಳು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ವೇಳೆ ಶಾಲಾ ಆಡಳಿತ ಮಂಡಳಿ ಅಯ್ಯಪ್ಪ ಮಾಲಾಧಾರಿಗಳ ಬಳಿ ಕ್ಷಮೆ ಯಾಚಿಸಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಹಿಂದೆ ಡಿಸೆಂಬರ್ 1 ರಂದು ಚಿಕ್ಕಮಗಳೂರಿನ MES ಪಿಯು ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿ ತರಗತಿಗೆ ಬಂದಿದ್ದಕ್ಕೆ ಪ್ರಿನ್ಸಿಪಾಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಅಯ್ಯಪ್ಪ ಮಾಲೆ ತೆಗೆದು ಬರುವಂತೆ ಸೂಚನೆ ನೀಡಿ ಹೊರಗೆ ಕಳುಹಿಸಿದ್ದರು.
ಹಾಗೆ ಶಬರಿಮಲೆ ಮಾಲೆ ಧರಿಸಿದ್ದಕ್ಕೆ ವಿದ್ಯಾರ್ಥಿಯೋರ್ವನನ್ನ ಪ್ರಿನ್ಸಿಪಾಲ್ ಕಾಲೇಜಿನಿಂದ ಹೊರಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು ಬಾಳೆಹೊನ್ನೂರಿನ ಕಡ್ಲೆಮಕ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿತ್ತು. ಒಂದೇ ತಿಂಗಳಲ್ಲಿ ಒಟ್ಟು ಮೂರು ಪ್ರಕರಣಗಳು ಕಾಫಿನಾಡಿನಲ್ಲಿ ಕಾಣಿಸಿಕೊಂಡಿದ್ದವು.
