Monday, August 17, 2026
Homeರಾಜಕೀಯಕೇಂದ್ರದ ಅಸಹಕಾರದ ನಡುವೆಯೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ

ಕೇಂದ್ರದ ಅಸಹಕಾರದ ನಡುವೆಯೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ

Telegram Group
Join Now

ಬೆಳಗಾವಿ: ರಾಜ್ಯದ ಐದು ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ 1.06 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದು, ಅದರಲ್ಲಿ 46,276 ಕೋಟಿ ರೂಪಾಯಿಗಳನ್ನು ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿಯೇ ವಿನಿಯೋಗಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮತೋಲನ ಮತ್ತು ರೈತರ ಸಮಸ್ಯೆಗಳ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಿರುವುದಾಗಿ ತಿಳಿಸಿದರು.

1. ಗ್ಯಾರಂಟಿಗಳಿಂದ ಸಾಮಾಜಿಕ ನ್ಯಾಯ

ರಾಜ್ಯದ ಜನಸಂಖ್ಯೆಯಲ್ಲಿ ಶೇ. 42ರಷ್ಟು ಜನರಿರುವ ಉತ್ತರ ಕರ್ನಾಟಕಕ್ಕೆ ಆರ್ಥಿಕ ಶಕ್ತಿ ತುಂಬುವುದು ಸರ್ಕಾರದ ಉದ್ದೇಶವಾಗಿದೆ. “ಆರ್ಥಿಕ ಚಟುವಟಿಕೆಗಳು ಹೆಚ್ಚಾದಾಗ ಮಾತ್ರ ಜಾತಿ ವ್ಯವಸ್ಥೆಯ ಅಡೆತಡೆಗಳನ್ನು ಹೋಗಲಾಡಿಸಲು ಸಾಧ್ಯ. ಗ್ಯಾರಂಟಿ ಯೋಜನೆಗಳು ಕೇವಲ ಹಣ ಹಂಚಿಕೆಯಲ್ಲ, ಅವು ಜನರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಸಾಧನಗಳು” ಎಂದರು.

2. ಕಬ್ಬು ಬೆಳೆಗಾರರ ಹಿತರಕ್ಷಣೆ: ಕೇಂದ್ರದ ವಿರುದ್ಧ ಕಿಡಿ

ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಎಫ್‌ಆರ್‌ಪಿ (FRP) ಮತ್ತು ಎಂಎಸ್‌ಪಿ (MSP) ನಿಗದಿ ಮಾಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.

  • ದರ ಏರಿಕೆ ಬೇಡಿಕೆ: ಸಕ್ಕರೆ ಎಂಎಸ್‌ಪಿ ಬೆಲೆಯನ್ನು 31 ರೂ.ಗಳಿಂದ 41 ರೂ.ಗೆ ಹೆಚ್ಚಿಸಲು ಪ್ರಧಾನಿಗಳಿಗೆ ಪತ್ರ ಬರೆಯಲಾಗಿದೆ.
  • ಎಥನಾಲ್ ಹಂಚಿಕೆಯಲ್ಲಿ ತಾರತಮ್ಯ: ಗುಜರಾತ್ ಮತ್ತು ಹರಿಯಾಣಕ್ಕೆ ಹೋಲಿಸಿದರೆ ಕರ್ನಾಟಕಕ್ಕೆ ಅತಿ ಕಡಿಮೆ ಎಥನಾಲ್ ಹಂಚಿಕೆ ಮಾಡಲಾಗುತ್ತಿದೆ. ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ನಮಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

3. ನೀರಾವರಿ ಯೋಜನೆಗಳು ಮತ್ತು ಕೇಂದ್ರದ ವಿಳಂಬ

ಮಹದಾಯಿ: ಪರಿಸರ ತೀರುವಳಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರಲಾಗುತ್ತಿದೆ. ಗೋವಾದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಅಲ್ಲಿ ರಾಜೀ ಮಾಡಿಕೊಳ್ಳಲು ಕೇಂದ್ರ ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.

  • ಕೃಷ್ಣಾ ಮೇಲ್ದಂಡೆ (UKP-III): 173 ಟಿಎಂಸಿ ನೀರು ಬಳಸಿಕೊಳ್ಳಲು ಗೆಜೆಟ್ ಅಧಿಸೂಚನೆ ಹೊರಡಿಸಲು ಕೇಂದ್ರ 12 ವರ್ಷಗಳಿಂದ ವಿಳಂಬ ಮಾಡುತ್ತಿದೆ. ಈ ಯೋಜನೆಗಾಗಿ 75 ಸಾವಿರ ಎಕರೆ ಭೂಮಿಯನ್ನು ಒಂದೇ ಹಂತದಲ್ಲಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ.
  • ಭದ್ರಾ ಮೇಲ್ದಂಡೆ: 2023-24ರ ಬಜೆಟ್‌ನಲ್ಲಿ ಘೋಷಿಸಿದ 5,300 ಕೋಟಿ ರೂಪಾಯಿಗಳಲ್ಲಿ ಕೇಂದ್ರ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ.

4. ತೆರಿಗೆ ಹಂಚಿಕೆಯಲ್ಲಿ ಅನ್ಯಾಯ

ರಾಜ್ಯದ ತೆರಿಗೆ ಪಾಲು ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯದ ಬಗ್ಗೆ ಮಾತನಾಡಿದ ಅವರು “ರಾಜ್ಯದಿಂದ ಒಂದು ರೂಪಾಯಿ ತೆರಿಗೆ ಹೋದರೆ ವಾಪಸ್ ಬರುತ್ತಿರುವುದು ಕೇವಲ 14-15 ಪೈಸೆ ಮಾತ್ರ. ಉಳಿದ 85 ಪೈಸೆ ಕೇಂದ್ರದ ಬಳಿಯೇ ಉಳಿಯುತ್ತಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯಕ್ಕೆ 4.50 ಲಕ್ಷ ಕೋಟಿ ರೂ. ನಷ್ಟವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

5. ಪ್ರಾದೇಶಿಕ ಅಸಮತೋಲನ ಸರಿಪಡಿಸಲು ಹೊಸ ಸಮಿತಿ

ನಂಜುಂಡಪ್ಪ ವರದಿಯ ನಂತರದ ಪ್ರಗತಿಯನ್ನು ಪರಿಶೀಲಿಸಲು ಪ್ರೊ. ಗೋವಿಂದರಾವ್ ಸಮಿತಿ ರಚಿಸಲಾಗಿದೆ. ಜನವರಿಯಲ್ಲಿ ವರದಿ ಸಲ್ಲಿಕೆಯಾಗಲಿದ್ದು, ಹಿಂದುಳಿದ ಜಿಲ್ಲೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ವಸತಿ ಯೋಜನೆಯಡಿ ಉತ್ತರ ಕರ್ನಾಟಕವೊಂದರಲ್ಲೇ ನಮ್ಮ ಸರ್ಕಾರ 2,09,836 ಮನೆಗಳನ್ನು ನಿರ್ಮಿಸಿದೆ ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದರು.

ನಮಗೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂಬ ಭೇದವಿಲ್ಲ. ಕರ್ನಾಟಕ ಒಂದೇ, ಎಲ್ಲ ಭಾಗದ ಜನರ ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments