ಮೂಡಿಗೆರೆ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವತಿಯಿಂದ ಆಯೋಜಿಸಲಾಗಿದ್ದ 14 ವರ್ಷ ವಯೋಮಿತಿಯ (ಅಂಡರ್–14) ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಿಕ್ಕಮಗಳೂರು ಜಿಲ್ಲಾ ತಂಡವನ್ನು ಆಯ್ಕೆ ಮಾಡಲಾಗಿದ್ದು, ಬಣಕಲ್ ನಿವಾಸಿ ಬದ್ರಿಯಾ ಲತೀಫ್ ಅವರ ಪುತ್ರ ರಾಹಿಲ್ ತಂಡಕ್ಕೆ ಸ್ಥಾನ ಪಡೆದಿದ್ದಾರೆ.

ಈ ತಿಂಗಳು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ತಂಡಗಳು ಭಾಗವಹಿಸಲಿದ್ದು, ಯುವ ಕ್ರಿಕೆಟ್ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗಲಿದೆ.
ರಾಹಿಲ್ ಅವರ ಈ ಸಾಧನೆಗೆ ತಂದೆಯ ನಿರಂತರ ಸಹಕಾರ, ಮಾರ್ಗದರ್ಶನ ಹಾಗೂ ಕುಟುಂಬದ ಪ್ರೋತ್ಸಾಹ ಪ್ರಮುಖ ಕಾರಣವಾಗಿದೆ. ಬಾಲ್ಯದಿಂದಲೇ ಕ್ರಿಕೆಟ್ ಆಸಕ್ತಿ ಹೊಂದಿರುವ ಅವರು ಶಿಸ್ತುಬದ್ಧ ಅಭ್ಯಾಸ ಮತ್ತು ಕಠಿಣ ಪರಿಶ್ರಮದ ಮೂಲಕ ಈ ಹಂತವನ್ನು ತಲುಪಿದ್ದಾರೆ.
ರಾಹಿಲ್ ಅವರ ಆಯ್ಕೆಯಿಂದ ಬಣಕಲ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕ್ರೀಡಾ ವಲಯದಲ್ಲಿ ಸಂತಸ ಮೂಡಿದ್ದು, ಕುಟುಂಬ ಸದಸ್ಯರು, ಕ್ರೀಡಾಭಿಮಾನಿಗಳು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿ, ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.
