ಮೂಡಿಗೆರೆ: ಸ್ವಂತ ಕಾರಿನಲ್ಲಿ ಅಕ್ರಮವಾಗಿ ‘ಪೊಲೀಸ್’ ನಾಮಫಲಕ ಅಳವಡಿಸಿಕೊಂಡು ಕುಟುಂಬ ಸಮೇತ ಪ್ರವಾಸಕ್ಕೆ ತೆರಳುತ್ತಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಂಡ ಪಿಎಸ್‌ಐ ರೇಣುಕಾ ಅವರ ಕಾರ್ಯಾಚರಣೆ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.

ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಣಕಲ್ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ರೇಣುಕಾ ಅವರು, ಧಾರವಾಡದಿಂದ ಧರ್ಮಸ್ಥಳಕ್ಕೆ ಕುಟುಂಬ ಸಮೇತ (ಫ್ಯಾಮಿಲಿ ಟ್ರಿಪ್) ತೆರಳುತ್ತಿದ್ದ ಕಾರನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ, ಅಧಿಕೃತ ಕರ್ತವ್ಯದಲ್ಲಿಲ್ಲದಿದ್ದರೂ ಕಾರಿನಲ್ಲಿ ‘ಪೊಲೀಸ್’ ಎಂಬ ನಾಮಫಲಕ ಅಳವಡಿಸಿರುವುದು ಪತ್ತೆಯಾಯಿತು.
ನಿಯಮಾನುಸಾರ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಥವಾ ಅಧಿಕೃತ ಅನುಮತಿ ಇಲ್ಲದೆ ‘ಪೊಲೀಸ್’ ನಾಮಫಲಕ ಬಳಕೆ ಕಾನೂನುಬಾಹಿರವಾಗಿರುವ ಹಿನ್ನೆಲೆಯಲ್ಲಿ, ಪಿಎಸ್‌ಐ ರೇಣುಕಾ ಅವರು ಹುದ್ದೆ, ಪರಿಚಯ ಯಾವುದಕ್ಕೂ ಲೆಕ್ಕಿಸದೇ ಸ್ಥಳದಲ್ಲೇ ನಾಮಫಲಕವನ್ನು ತೆರವುಗೊಳಿಸಿ, ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಂಡ ವಿಧಿಸಿ ಪ್ರಕರಣ ದಾಖಲಿಸಿದರು.
ಈ ಕ್ರಮದ ಮೂಲಕ, ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲೂ ಪೊಲೀಸ್ ಗುರುತು ಬಳಸುವುದರಿಂದ ಸಾರ್ವಜನಿಕರಲ್ಲಿ ತಪ್ಪು ಭ್ರಮೆ ಉಂಟಾಗಬಹುದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಕಾನೂನು ಎಲ್ಲರಿಗೂ ಸಮಾನ ಎಂಬ ಸಂದೇಶವನ್ನು ಪೊಲೀಸ್ ಇಲಾಖೆ ಸಮಾಜಕ್ಕೆ ಬಲವಾಗಿ ರವಾನಿಸಿದೆ. ಕರ್ತವ್ಯನಿಷ್ಠೆ ಹಾಗೂ ಕಾನೂನು ಪ್ರಾಮಾಣಿಕತೆಯ ಪ್ರತೀಕವಾಗಿ ಪಿಎಸ್‌ಐ ರೇಣುಕಾ ಅವರ ಈ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
