Wednesday, March 25, 2026
Homebig breakingಉನ್ನಾವೊ ಅತ್ಯಾಚಾರ ಪ್ರಕರಣ: ಕುಲದೀಪ್ ಸಿಂಗ್ ಸೆಂಗಾರ್ ಜಾಮೀನು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನಾವೊ ಅತ್ಯಾಚಾರ ಪ್ರಕರಣ: ಕುಲದೀಪ್ ಸಿಂಗ್ ಸೆಂಗಾರ್ ಜಾಮೀನು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: ಉನ್ನಾವೊ ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ಮತ್ತು ಶಿಕ್ಷೆ ಅಮಾನತು ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.

 ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಈ ಮಹತ್ವದ ಆದೇಶ ಹೊರಡಿಸಿದ್ದು, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯ ಆಧಾರದ ಮೇಲೆ ಸೆಂಗಾರ್‌ಗೆ ನೋಟಿಸ್ ಜಾರಿ ಮಾಡಿದೆ. ಸಂತ್ರಸ್ತೆಯ ಸುರಕ್ಷತೆಯ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿರುವ ನ್ಯಾಯಾಲಯವು, ಈ ಬಗ್ಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೆಂಗಾರ್‌ಗೆ ಸೂಚಿಸಿದೆ.

ಸಿಬಿಐ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಇದು ಮಗುವಿನ ಮೇಲಿನ ಅತ್ಯಂತ ಭಯಾನಕ ಅತ್ಯಾಚಾರ ಪ್ರಕರಣವಾಗಿದ್ದು, ಆರೋಪಿಯು ಆ ಪ್ರದೇಶದ ಅತ್ಯಂತ ಪ್ರಭಾವಿ ಶಾಸಕರಾಗಿದ್ದರು ಎಂದು ತಿಳಿಸಿದರು. ಒಬ್ಬ ವ್ಯಕ್ತಿಯು ಅಂತಹ ಪ್ರಬಲ ಸ್ಥಾನದಲ್ಲಿದ್ದಾಗ ಅಪರಾಧವನ್ನು ಮರೆಮಾಚುವ ಸಾಧ್ಯತೆ ಹೆಚ್ಚಿರುತ್ತದೆ, ಆದ್ದರಿಂದ ಅವರನ್ನು ಕಸ್ಟಡಿಯಿಂದ ಬಿಡುಗಡೆ ಮಾಡಬಾರದು ಎಂದು ಅವರು ವಾದಿಸಿದರು. ಈ ವಾದವನ್ನು ಆಲಿಸಿದ ನ್ಯಾಯಪೀಠವು, ಪ್ರಕರಣದಲ್ಲಿ ಕಾನೂನಿನ ಗಣನೀಯ ಪ್ರಶ್ನೆಗಳು ಉದ್ಭವಿಸಿವೆ ಎಂದು ಅಭಿಪ್ರಾಯಪಟ್ಟು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತು.

ಇನ್ನೊಂದೆಡೆ, ಸೆಂಗಾರ್ ಜಾಮೀನಿನ ಮೇಲೆ ಹೊರಬಂದಾಗ ದೆಹಲಿಯಲ್ಲಿ ನಡೆದ ಘಟನೆಗಳು ಆಕ್ರೋಶಕ್ಕೆ ಕಾರಣವಾಗಿದ್ದವು. ಸಂತ್ರಸ್ತೆ ಮತ್ತು ಆಕೆಯ ತಾಯಿಯನ್ನು ಭದ್ರತಾ ಪಡೆಗಳು ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಚಲಿಸುತ್ತಿದ್ದ ಬಸ್ಸಿನಿಂದ ತಾಯಿಯನ್ನು ಕೆಳಕ್ಕೆ ಇಳಿಸಿ, ಮಗಳನ್ನು ಮಾತ್ರ ಕರೆದೊಯ್ದ ವೀಡಿಯೊಗಳು ಹರಿದಾಡಿದ್ದವು. “ನಮಗೆ ನ್ಯಾಯ ಸಿಗುತ್ತಿಲ್ಲ, ನನ್ನ ಮಗಳನ್ನು ಒತ್ತೆ ಇರಿಸಿಕೊಳ್ಳಲಾಗಿದೆ” ಎಂದು ಸಂತ್ರಸ್ತೆಯ ತಾಯಿ ಕಣ್ಣೀರು ಹಾಕಿದ್ದರು. ಇತ್ತ ಸಂತ್ರಸ್ತೆಯು ತನಗೆ ಸುಪ್ರೀಂ ಕೋರ್ಟ್ ಮೇಲೆ ನಂಬಿಕೆ ಇದೆ ಎಂದು ಹೇಳುತ್ತಲೇ, ಸೆಂಗಾರ್ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಹಿಂದೆ ದೆಹಲಿ ಹೈಕೋರ್ಟ್ ಸೆಂಗಾರ್‌ನನ್ನು ‘ಸಾರ್ವಜನಿಕ ಸೇವಕ’ ಅಲ್ಲ ಎಂದು ಪರಿಗಣಿಸಿ, ಪೋಕ್ಸೋ ಕಾಯ್ದೆ ಅನ್ವಯಿಸುವುದಿಲ್ಲ ಎಂಬ ಕಾರಣ ನೀಡಿ ಜಾಮೀನು ಮಂಜೂರು ಮಾಡಿತ್ತು. ಆದರೆ ಈಗ ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ತಡೆ ನೀಡಿರುವುದರಿಂದ ಕುಲದೀಪ್ ಸಿಂಗ್ ಸೆಂಗಾರ್ ಸದ್ಯಕ್ಕೆ ಜೈಲಿನಲ್ಲೇ ಇರಬೇಕಾಗುತ್ತದೆ. ಸಂತ್ರಸ್ತೆಯು ತಮ್ಮ ಕುಟುಂಬದ ರಕ್ಷಣೆಗಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!