Friday, September 25, 2026
Homeಕ್ರೈಮ್ಹಾಸನ ಜೈಲಿನಲ್ಲಿ ಸಾಮರ್ಥ್ಯಕ್ಕಿಂತ 84 ಕೈದಿಗಳು ಹೆಚ್ಚಳ: ಡಿಜಿಪಿ ಅಲೋಕ್‌ಕುಮಾರ್

ಹಾಸನ ಜೈಲಿನಲ್ಲಿ ಸಾಮರ್ಥ್ಯಕ್ಕಿಂತ 84 ಕೈದಿಗಳು ಹೆಚ್ಚಳ: ಡಿಜಿಪಿ ಅಲೋಕ್‌ಕುಮಾರ್

Telegram Group
Join Now

ಹಾಸನ : ಜಿಲ್ಲಾ ಕಾರಾಗೃಹದಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳನ್ನು ಇರಿಸಲಾಗಿದ್ದು, ಮೂಲಸೌಕರ್ಯದ ಮೇಲಿನ ಒತ್ತಡ ಹೆಚ್ಚಾಗಿದೆ. 250 ಕೈದಿಗಳನ್ನು ಇರಿಸುವ ಸಾಮರ್ಥ್ಯವಿರುವ ಜೈಲಿನಲ್ಲಿ ಪ್ರಸ್ತುತ 334 ಮಂದಿ ಕೈದಿಗಳಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಕಾರಾಗೃಹ ನಿರ್ಮಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆಡಳಿತ ಹಾಗೂ ಕಾರಾಗೃಹ ವಿಭಾಗದ ಡಿಜಿಪಿ ಅಲೋಕ್‌ಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಕಾರಾಗೃಹಕ್ಕೆ ಗುರುವಾರ ಭೇಟಿ ನೀಡಿ ಜೈಲಿನ ವಿವಿಧ ವಿಭಾಗಗಳನ್ನು ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ಕಾರಾಗೃಹಕ್ಕೆ ಈ ಹಿಂದೆ ಭೇಟಿ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಜೈಲಿನ ನೈಜ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಕೈದಿಗಳ ಸಂಖ್ಯೆಗೆ ಹೋಲಿಸಿದರೆ ಸ್ಥಳಾವಕಾಶ ಕಡಿಮೆ ಇರುವುದು ಗಮನಕ್ಕೆ ಬಂದಿದೆ.

250 ಮಂದಿಗೆ ಮಾತ್ರ ಅವಕಾಶವಿರುವ ಜಾಗದಲ್ಲಿ 334 ಕೈದಿಗಳಿರುವುದರಿಂದ ಹೆಚ್ಚುವರಿ ಒತ್ತಡ ಉಂಟಾಗಿದೆ. ಭವಿಷ್ಯದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸ ಜೈಲು ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಕೈದಿಗಳು ಜೈಲು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಶಿಸ್ತು ಕಾಪಾಡಬೇಕು. ಕೈದಿಗಳ ಸ್ವಚ್ಛತೆ, ಕೂದಲು ಕತ್ತರಿಸುವುದು, ಆಹಾರದ ಗುಣಮಟ್ಟ ಸೇರಿದಂತೆ ಮೂಲಭೂತ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ಜೈಲಿನ ಆಹಾರವನ್ನು ಪರಿಶೀಲಿಸಿದ್ದು, ಗುಣಮಟ್ಟ ಸಮರ್ಪಕವಾಗಿದೆ ಎಂದು ಹೇಳಿದರು.

ಜೈಲಿನೊಳಗೆ ಹೊರಗಿನಿಂದ ವಸ್ತುಗಳನ್ನು ಎಸೆಯುವ ಸಮಸ್ಯೆ ಸೇರಿದಂತೆ ಕೆಲವು ಭದ್ರತಾ ಸವಾಲುಗಳು ಎದುರಾಗಿದ್ದವು. ಕೆಲವು ಗ್ಯಾಂಗ್‌ಗಳಿಗೆ ಸೇರಿದವರು ಹಾಗೂ ಮಂಜೇಶ್ ಕೊಲೆ ಪ್ರಕರಣದ ಆರೋಪಿಗಳ ಪೈಕಿ ಹತ್ತು ಮಂದಿ ಹಾಸನ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ಗಲಾಟೆ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ಮೈಸೂರು ಕಾರಾಗೃಹಕ್ಕೆ ಸ್ಥಳಾಂತರಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಲೋಕ್‌ಕುಮಾರ್ ತಿಳಿಸಿದರು. ಕೆಲವು ಕೈದಿಗಳು ಉದ್ದೇಶಪೂರ್ವಕವಾಗಿ ಗಲಾಟೆ ಅಥವಾ ಸಮಸ್ಯೆ ಸೃಷ್ಟಿಸುವ ಘಟನೆಗಳು ನಡೆಯುತ್ತವೆ. ಇಂತಹ ವಿಚಾರಗಳ ಕುರಿತು ಪೊಲೀಸರು ಹಾಗೂ ಜೈಲು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಗುರುವಾರದ ಪರಿಶೀಲನೆ ವೇಳೆ ಯಾವುದೇ ಅಕ್ರಮ ವಸ್ತುಗಳು ಪತ್ತೆಯಾಗಿಲ್ಲ ಎಂದರು.

ಕಾರಾಗೃಹಗಳಲ್ಲಿನ ಮೊಬೈಲ್ ಫೋನ್‌ಗಳ ಅಕ್ರಮ ಬಳಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. 2026ರಲ್ಲಿ ಹಾಸನ ಜೈಲಿನೊಳಗೆ ಹೊಸದಾಗಿ ಮೊಬೈಲ್ ಫೋನ್‌ಗಳು ಬಂದಿರುವುದು ಪತ್ತೆಯಾಗಿಲ್ಲ. ಈ ಹಿಂದೆ ಜೈಲಿನೊಳಗೆ ಪತ್ತೆಯಾದ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ರಾಜ್ಯದ ಹಲವು ಜೈಲುಗಳಲ್ಲಿ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದ್ದು, ಸಂಪೂರ್ಣವಾಗಿ ಮೊಬೈಲ್ ಮುಕ್ತಗೊಳಿಸಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ; ಆದರೆ ನಿಯಂತ್ರಣಕ್ಕೆ ಕ್ರಮ ಮುಂದುವರಿದಿದೆ ಎಂದು ಹೇಳಿದರು.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿಯೂ ಮೊಬೈಲ್ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ. ಹಿಂದಿನ ಸಂಗ್ರಹದಲ್ಲಿದ್ದ ಮೊಬೈಲ್‌ಗಳನ್ನು ಕೆಲವರು ಬಳಸುತ್ತಿದ್ದರು. ಕೈದಿಗಳು ಕುಟುಂಬಸ್ಥರು ಹಾಗೂ ಸಂಬಂಧಿಕರೊಂದಿಗೆ ಮಾತನಾಡಲು ಅಧಿಕೃತ ಜೈಲು ಕರೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಅದನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಲು ಅವಕಾಶ ನೀಡುವುದಿಲ್ಲ. ರಾಜ್ಯದ ಕಾರಾಗೃಹಗಳಲ್ಲಿ 48 ಜೈಲು ಕರೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ಕೆಪಿಎಸ್‌ಸಿ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಸ್‌ಐಟಿ ವಿಚಾರ ಸರ್ಕಾರ ಮತ್ತು ನ್ಯಾಯಾಲಯದ ನಡುವಿನ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದರು.

ಪರಿಶೀಲನೆ ವೇಳೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!