Tuesday, February 10, 2026
Homeಕ್ರೈಮ್ಹಾಸನ: ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರೈತರ ಭೂಮಿ ಹರಾಜು ಪ್ರಕ್ರಿಯೆ ಕೈಬಿಡಲಿ: ಜಿಲ್ಲಾಧಿಕಾರಿ ಕಚೇರಿ ಎದುರು ರೈತರ...

ಹಾಸನ: ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರೈತರ ಭೂಮಿ ಹರಾಜು ಪ್ರಕ್ರಿಯೆ ಕೈಬಿಡಲಿ: ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ!

ಹಾಸನ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರ ಭೂಮಿಯನ್ನು ಆನ್‌ಲೈನ್ ಮೂಲಕ ಹರಾಜು ಹಾಕುವ ಪ್ರಕ್ರಿಯೆಯನ್ನು ತಕ್ಷಣವೇ ಕೈಬಿಡಬೇಕು ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭನೆ ನಡೆಸಿದರು. ​

ನಗರದ ಹೇಮಾವತಿ ಪ್ರತಿಮೆ ಎದುರು ಜಮಾಯಿಸಿದ ನೂರಾರು ರೈತರು ಮತ್ತು ಸಂಘಟನೆಯ ಮುಖಂಡರು, ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಎನ್.ಆರ್. ವೃತ್ತದ ಮೂಲಕ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಸರ್ಫೇಸಿ ಕಾಯ್ದೆ ವಿರುದ್ಧ ಆಕ್ರೋಶ ​ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಜಿಲ್ಲೆಯ ಅರೇಹಳ್ಳಿ ಕೆನರಾ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದ ಕಾಫಿ ಬೆಳೆಗಾರರ ಭೂಮಿಯನ್ನು ಸಾಲ ವಸೂಲಾತಿಗಾಗಿ ಆನ್‌ಲೈನ್ ಮೂಲಕ ಹರಾಜು ಮಾಡಲಾಗುತ್ತಿದೆ. ಇದು ಅತ್ಯಂತ ಖಂಡನೀಯ. ರೈತರು ಅತಿವೃಷ್ಟಿ, ಅನಾವೃಷ್ಟಿ ಹಾಗೂ ಕಾಡಾನೆ ಹಾವಳಿಯಿಂದ ತತ್ತರಿಸಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಬ್ಯಾಂಕ್‌ಗಳು ಸರ್ಫೇಸಿ ಕಾಯ್ದೆ ಅನ್ವಯ ಏಕಾಏಕಿ ನೋಟಿಸ್ ನೀಡಿ ಜಮೀನು ಹರಾಜು ಹಾಕಲು ಮುಂದಾಗಿರುವುದು ಸರಿಯಲ್ಲ ಎಂದು ದೂರಿದರು.

ಕೇವಲ 2-3 ಎಕರೆ ಹೊಂದಿರುವ ಬಡ ರೈತರು ಈ ನೀತಿಗಳಿಂದಾಗಿ ಬೀದಿಗೆ ಬರುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಮಧ್ಯಪ್ರವೇಶಿಸಿ ರೈತರ ಭೂಮಿಯನ್ನು ರಕ್ಷಿಸಬೇಕು. ಒಂದು ವೇಳೆ ಹರಾಜು ಪ್ರಕ್ರಿಯೆ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
​ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಮಗ್ಗೆ ಹೊಸಮಠ ಗ್ರಾಮದ ಶಿಲುಬೆ ಬೆಟ್ಟದಲ್ಲಿ ನಡೆಯುತ್ತಿರುವ ಬಂಡೆ ಒಡೆಯುವ ಕಾರ್ಯವನ್ನು ತಕ್ಷಣ ನಿಲ್ಲಿಸಬೇಕು. ಇದರಿಂದ ಕಾಡುಪ್ರಾಣಿಗಳು ನಾಡಿಗೆ ನುಗ್ಗುತ್ತಿದ್ದು, ಬೆಳೆ ನಾಶವಾಗುತ್ತಿದೆ. ಪವಿತ್ರ ಸ್ಥಳವಾಗಿರುವ ಈ ಬೆಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದ ರೈತರು ಗುಣಮಟ್ಟದ ಬೀಜದ ಕೊರತೆಯಿಂದಾಗಿ ಸಂಕಷ್ಟದಲ್ಲಿದ್ದಾರೆ. ಕೆಎಂಎಫ್‌ನಲ್ಲಿ ಜೋಳ ಖರೀದಿ ಮಾಡುತ್ತಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆದು ರೈತರ ನೆರವಿಗೆ ಧಾವಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಆನೆಕೆರೆ ರವಿ, ಬಾಬು, ಮೊಹಮ್ಮದ್ ಸಾದಿಕ್, ಜಯಣ್ಣ, ಶಿವರಾಮೇಗೌಡ, ಪವಿತ್ರ, ಕಾಳಯ್ಯ, ಲಕ್ಷ್ಮೀಶ, ರುದ್ರಮ್ಮ, ಕಮಲಮ್ಮ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!