ಬೆಂಗಳೂರು: “ಪಂಡಿತ್ ಜವಾಹರಲಾಲ್ ನೆಹರೂ ಅವರ ಒಪ್ಪಿಗೆಗೆ ವಿರುದ್ಧವಾಗಿ ಅಂದು ಐತಿಹಾಸಿಕ ಸೋಮನಾಥ ಮಂದಿರ ನಿರ್ಮಾಣವಾಗಿತ್ತು” ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
“ಐತಿಹಾಸಿಕ ಸೋಮನಾಥ ಮಂದಿರಕ್ಕೆ 75 ವರ್ಷ” ತುಂಬಿದ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಸೋಮನಾಥ ದೇವಾಲಯವು ಸಾವಿರ ವರ್ಷಗಳ ಇತಿಹಾಸವುಳ್ಳ ಪುರಾತನ ಶ್ರದ್ಧಾಕೇಂದ್ರ” ಎಂದು ವಿವರಿಸಿದರು.
1951ರಲ್ಲಿ ದೇವಾಲಯವನ್ನು ಪುನರ್ ಸ್ಥಾಪನೆ ಮಾಡಿ ಲೋಕಾರ್ಪಣೆಗೊಳಿಸಲಾಯಿತು. ಇಂದು ದೇಶದ 140 ಕೋಟಿ ಜನರು ಸೋಮನಾಥ ದೇವಾಲಯಕ್ಕೆ ಭಕ್ತಿ-ಶ್ರದ್ಧೆಯಿಂದ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಇವತ್ತು ಬಿಜೆಪಿ ಅಷ್ಟೇ ಅಲ್ಲದೆ, ಇಡೀ ದೇಶದ ಹಿಂದೂಗಳು ಈ ದೇವಾಲಯದ ಪುನರ್ ನಿರ್ಮಾಣದ ಸ್ಮರಣಾರ್ಥವಾಗಿ ತಮ್ಮ ತಮ್ಮ ಊರುಗಳಲ್ಲಿ ಶಿವನ ಪೂಜೆ ನೆರವೇರಿಸುತ್ತಿದ್ದಾರೆ. ಅದರಂತೆ ನಮ್ಮ ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿ ಇಂದು ಪೂಜೆ ಸಲ್ಲಿಸಿದ್ದೇವೆ. ಲೋಕ ಕಲ್ಯಾಣಕ್ಕಾಗಿ ಮತ್ತು ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.
ಇತಿಹಾಸವನ್ನು ಸ್ಮರಿಸಿದ ಅವರು, “ಮೊಘಲರ ದಾಳಿಗೆ ದೇವಾಲಯ ಸಂಪೂರ್ಣ ನಾಶವಾಗಿತ್ತು ಮತ್ತು ಸಂಪತ್ತನ್ನು ಲೂಟಿ ಮಾಡಲಾಗಿತ್ತು. ಸ್ವಾತಂತ್ರ್ಯಾನಂತರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1948ರಲ್ಲಿ ದೇವಾಲಯದ ಪುನರ್ ನಿರ್ಮಾಣದ ಪ್ರಸ್ತಾಪ ಮುಂದಿಟ್ಟಾಗ, ಅಂದಿನ ಪ್ರಧಾನಿ ನೆಹರೂ ಅವರು ಯಾವುದೇ ಕಾರಣಕ್ಕೂ ದೇವಾಲಯ ನಿರ್ಮಿಸಬಾರದು ಎಂದಿದ್ದರು” ಎಂದು ಗಮನ ಸೆಳೆದರು.
ಆಗ ಗಾಡ್ಗೀಳ್ ಮತ್ತು ಕೆ.ಎಂ. ಮುನ್ಶಿ ಅವರು ಪಟೇಲರಿಗೆ ಧ್ವನಿಗೂಡಿಸಿ ದೇವಾಲಯ ನಿರ್ಮಾಣ ಆಗಲೇಬೇಕೆಂದು ಪಟ್ಟು ಹಿಡಿದರು. ಅಂದು ಮೌಲಾನಾ ಆಜಾದ್ ಅವರು ದೇವಾಲಯವನ್ನು ಪುರಾತತ್ವ ಇಲಾಖೆಗೆ ವಹಿಸೋಣ ಎಂದಿದ್ದರೂ, ಈ ನಾಯಕರೆಲ್ಲರೂ ಗತವೈಭವದ ಅನಾವರಣಕ್ಕಾಗಿ ದೇವಾಲಯದ ಪುನರ್ ನಿರ್ಮಾಣ ಆಗಲೇಬೇಕೆಂದು ಹಠ ಹಿಡಿದರು. ಅಂತಿಮವಾಗಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಇಚ್ಛೆಗೆ ವಿರುದ್ಧವಾಗಿ ಅಂದು ಭವ್ಯ ಮಂದಿರ ನಿರ್ಮಾಣವಾಯಿತು ಎಂದು ತಿಳಿಸಿದರು.
